ಕ್ಷುಲ್ಲಕ ಕಾರಣಕ್ಕೆ ಬೆನ್ನು ಮೂಳೆ ಮುರಿಯುವಂತೆ ಥಳಿಸಿದ ಮಹಿಳಾ ಪಿಎಸ್ ಐ | ಮೂರು ದಿನ ಅನ್ನ ನೀರು ಕೊಡದೆ ಚಿತ್ರಹಿಂಸೆ| ಗಂಭೀರ ಆರೋಪ ಮಾಡಿದ ಯುವಕ

ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಥಳಿಸಿ ಮೂಳೆ ಮುರಿಯುವಂತೆ ಹೊಡೆದಿರುವ ಘಟನೆಯೊಂದು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣೆಯ ಪಿಎಸ್ ಐ ವಿಜಯಕುಮಾರಿ ಯುವಕನ ಮೂಳೆ ಮುರಿದ ಆರೋಪ ಎದುರಿಸುತ್ತಿರುವವರು.

ಮಣಿಕಂಠ ಎಂಬಾತನೇ ಥಳಿತಕ್ಕೊಳಗಾದ ವ್ಯಕ್ತಿ.

ಬೀದಿಯಲ್ಲಿನ ನಲ್ಲಿ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಕಂಠನ ತಂದೆ ಮುನಿಯಪ್ಪ ಹಾಗೂ ಯಲ್ಲಮ್ಮ, ಶಿವಮೂರ್ತಿ ಎಂಬುವರ ನಡುವೆ ಗಲಾಟೆಯಾಗಿತ್ತು. ಈ ವಿಚಾರಕ್ಕೆ ಮಣಿಕಂಠನ ವಿರುದ್ಧ ಯಲ್ಲಮ್ಮ ಮತ್ತು ಶಿವಮೂರ್ತಿ ಚೇಳೂರು ಠಾಣೆಯಲ್ಲಿ ದೂರು ನೀಡಿದ್ದರು. ವಿಚಾರಣೆಗೆಂದು ಠಾಣೆಗೆ ಕರೆಸಿದ ಪಿಎಸ್ ಐ ವಿಜಯಕುಮಾರಿ ಮನಸೋ ಇಚ್ಛೆ ಥಳಿಸಿದ್ದಾರೆ. ಮೂರು ದಿನಗಳ ಕಾಲ ಊಟ ನೀರು ಕೊಡದೆ ಠಾಣೆಯಲ್ಲಿ ಕೂಡಿ ಹಾಕಿರೋ ಆರೋಪವೂ ಇದೆ. ಮಣಿಕಂಠ 15 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇನ್ನೂ ಸಂಪೂರ್ಣ ಗುಣಮುಖನಾಗಿಲ್ಲ.

ಇದರ ಜೊತೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ವೇಳೆ ನ್ಯಾಯಾಧೀಶರ ಮುಂದೆ ನಿಜ ಹೇಳಿದರೆ ಜಾಮೀನು ಸಿಗದಂತೆ ಮಾಡುವುದಾಗಿ ಬೆದರಿಸಿದ್ದಾರೆಂದು ಸಹ ಹೇಳಲಾಗಿದೆ.

ಈತನ ವಿರುದ್ಧ ಚೇಲೂರು ಪೊಲೀಸರು ಸೆಕ್ಷನ್ 506, 504, 324, 354 ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.

ಸದ್ಯ ಜೈಲಿನಿಂದ ಹೊರಬಂದಿರುವ ಮಣಿಕಂಠ, ಪಿಎಸ್ ಐ ವಿಜಯಕುಮಾರಿ ಹಾಗೂ ಸಿಬ್ಬಂದಿ ವಿರುದ್ಧ ಮಣಿಕಂಠನ ಕುಟುಂಬಸ್ಥರು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

Leave A Reply

Your email address will not be published.