ಅಂಕತ್ತಡ್ಕ: ಶಾಲೆಯಲ್ಲಿ ನಮಾಝ್ ಪ್ರಕರಣ | ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಸಭೆ | ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತ -ಶಿಕ್ಷಣಾಧಿಕಾರಿ ಲೋಕೇಶ್
ಸವಣೂರು: ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಕೊಠಡಿಯೊಂದರಲ್ಲಿ ನಮಾಝ್ ನಡೆಸಿರುವ ಘಟನೆ ಮುಂದಿನ ದಿನಗಳಲ್ಲಿ ಮರುಕಳಿಸುವುದಿಲ್ಲ , ಸರ್ಕಾರಿ ಶಾಲೆಯಲ್ಲಿರುವ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಮಾಡಿಕೊಳ್ಳುವ ಶಾಲಾಭಿವೃದ್ದಿಯ ನಿರ್ಣಯಕ್ಕೆ ಎಲ್ಲಾ ಪೋಷಕರು ಬದ್ದರಾಗಿದ್ದಾರೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ತಿಳಿಸಿದರು.
ಶಾಲೆಯ ಕೊಠಡಿಯೊಂದರಲ್ಲಿ ಶುಕ್ರವಾರ ವಿದ್ಯಾರ್ಥಿಗಳು ನಮಾಝ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಅಂಕತ್ತಡ್ಕ ಶಾಲೆಯಲ್ಲಿ ಶನಿವಾರ ನಡೆದ ಅಧಿಕಾರಿಗಳ, ಎಸ್ ಡಿ ಎಂ ಸಿ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಲೆಯಲ್ಲಿ ನಡೆದ ಘಟನೆ ಅನಿರೀಕ್ಷಿತವಾಗಿದೆ.
ವಿದ್ಯಾರ್ಥಿಗಳು ನಮಾಝ್ ಮಾಡಿತ್ತಿರುವುದು ಇಲ್ಲಿನ ಶಿಕ್ಷಕರಿಗೆ ಶುಕ್ರವಾರ ಗಮನಕ್ಕೆ ಬಂದಿದೆ ಈ ಬಗ್ಗೆ ಮೇಲಾಧಿಕಾರಿಗಳಿಗೆ ಎಸ್ ಡಿ ಎಂ ಸಿ ಪದಾಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಒಗ್ಗಟ್ಟಿನಿಂದ ಮುನ್ನಡೆಯುವ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ.
ಎಲ್ಲಾ ವರ್ಗದ ಜನರಿಗೆ ಸಮಾನತೆಯಲ್ಲಿ ಶಿಕ್ಷಣ ನೀಡುವುದು ಶೈಕ್ಷಣಿಕ ಧರ್ಮವಾಗಿದೆ. ಶೈಕ್ಷಣಿಕ ಚಟುವಟಿಕೆಗಳು , ಕಾನೂನಿನ ಬಗ್ಗೆ ಪೊಷಕರಿಗೆ ತಿಳಿಯಪಡಿಸುವುದು ಶಾಲೆಯಲ್ಲಿ ಗೊಂದಲ ವಾತವಾರಣ ಉಂಟುಮಾಡುವ ಯಾವೂದೆ ಘಟನೆಗಳನ್ನು ನಡೆಯಬಾರದು ಎನ್ನುವ ಅಭಿಪ್ರಾಯಕ್ಕೆ ಎಸ್ ಡಿ ಎಂ ಸಿ ಎಲ್ಲಾ ಪದಾಧಿಕರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಸವಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಸತೀಶ್ ಅಂಗಡಿಮೂಲೆ, ಭರತ್ ರೈ, ಹರಿಕಲಾ ರೈ, ಸುಂದರಿ ಬಿ ಎಸ್, ತಾರನಾಥ ಸುವರ್ಣ, ಹರೀಶ್ ಕೆ ಜೆ, ಶಭೀನಾ ಬಾನು, ಚೇತನಾ ಪಾಲ್ತಾಡಿ, ಪಿಡಿಓ ನಾರಾಯಣ ಬಿ,ಶಾಲಾಭಿವೃದ್ದಿ ನಿಕಟಪೂರ್ವ ಅಧ್ಯಕ್ಷ ಬಿ .ಪಿ. ವಿಶ್ವನಾಥ ಪೂಜಾರಿ, ಮುಖ್ಯ ಶಿಕ್ಷಕಿ ಜಲಜಾ ಮೊದಲಾದವರಿದ್ದರು.
ಸಭೆಗೆ ಎಸ್ ಡಿ ಎಂ ಸಿ ಪದಾಧಿಕಾರಿಗಳು , ನಿಕಟಪೂರ್ವ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮಾಧ್ಯಮದ ಮಂದಿಗೂ ಅವಕಾಶ ನಿರಾಕರಿಸಲಾಗಿತ್ತು. ಸಭೆಯಲ್ಲಿ ನಡೆಯುವ ಚರ್ಚೆಯ ಗೌಪ್ಯತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಭಾಗವಹಿಸುವ ಮಂದಿ ಮೊಬೈಲ್ ಬಳಕೆ ಮಾಡದಂತೆ ಸೂಚಿಸಲಾಗಿತ್ತು. ಶಾಲಾ ಅವರಣದೊಳಗಡೆ ಸಾರ್ವಜನಿಕರಿಗೆ ಓಡಾಟವನ್ನು ನಿಷೇಧಿಸಲಾಗಿತ್ತು. ಹೊರಗಡೆ ಪೋಷಕರು, ಸಮೂದಾಯದ ಮಂದಿ ಜಮಾಯಿಸಿದ್ದರು. ಬೆಳ್ಳಾರೆ ಪೊಲೀಸರು ಸೂಕ್ತ ರಕ್ಷಣೆ ಒದಗಿಸಿದ್ದರು. ಸೌಹಾರ್ದ ವಾತವರಣ ನಿರ್ಮಿಸಲು ಬದ್ದ ಎನ್ನುವ ಎಸ್ ಡಿ ಎಂ ಸಿ ನಿರ್ಣಯದಿಂದ ಗೊಂದಲ ತಿಳಿಯಾಯಿತು.
ಶಾಲಾ ವಾತವರಣ ಯಾವುದೇ ಸಮುದಾಯಕ್ಕೂ ಸೀಮಿತವಾಗಿರದೆ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರಬೇಕು, ಈ ನಿಟ್ಟಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಎಲ್ಲಾ ಪೋಷಕರ ಸಹಕಾರದೊಂದಿಗೆ ಶಾಲೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುವುದು.
-ಪ್ರವೀಣ್ ಭಂಡಾರಿ, ಎಸ್ ಡಿ ಎಂ ಸಿ ಅಧ್ಯಕ್ಷ.
ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಶೈಕ್ಷಣಿಕ ವಿಚಾರ ಮಾತ್ರ ನಡೆಯುತ್ತದೆ. ಶಿಕ್ಷಣಾಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ಒಗ್ಗಟ್ಟಿನಲ್ಲಿ ಮುನ್ನಡೆಯುತ್ತೆವೆ. ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡುವುದಿಲ್ಲ.
- ಶಬೀನಾ ಬಾನು ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ