ಬಂಟ್ವಾಳ: ಬೈಕ್ ಕಂತು ಪಾವತಿ ವಿಚಾರ, ಶೋ ರೂಂ ಎದುರೇ ಬೈಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಮಾಲಕ
ಬಂಟ್ವಾಳ: ಖಾಸಗಿ ಫೈನಾನ್ಸ್ ಕಂಪೆನಿಯವರು ಬೈಕ್ ಒಂದರ ಕಂತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಮಾಡಿದರೆಂದು,ಬೈಕ್ ಮಾಲಕನೇ ಶೋ ರೂಂ ಎದುರಿನಲ್ಲಿ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.
ಬೈಕ್ ಮಾಲಕ ಫರಂಗಿಪೇಟೆ ನಿವಾಸಿ ಮಹಮ್ಮದ್ ಹರ್ಷಾದ್ ಎಂಬಾತನಾಗಿದ್ದು,ಬೈಕ್ ಗೆ ಪೆಟ್ರೋಲ್ ಸುರಿದು ಬೈಕ್ ನ್ನು ಬೆಂಕಿಗೆ ಆಹುತಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹರ್ಷಾದ್ ಅವರು ಫೈನಾನ್ಸ್ ನಿಂದ ಬೈಕ್ ಕೊಂಡುಕೊಳ್ಳಲು ಸಾಲ ಮಾಡಿದ್ದು ಆ ಬಳಿಕ ಸಾಲದ ಕಂತು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ನವರು ಬೈಕ್ ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಮಾಲಕನ ಕೈಯಿಂದ ಪಡೆದುಕೊಂಡು ಕೂಡಲೇ ಸಾಲದ ಕಂತನ್ನು ಪಾವತಿ ಮಾಡುವಂತೆ ತಿಳಿಸಿದ್ದರು.ಇದರಿಂದ ಕಿರಿಕಿರಿ ಉಂಟಾಗಿ,ಮಾಲಕ ಬೈಕ್ ಜೊತೆ ಕೈಕಂಬದ ಬೈಕ್ ಶೋ ರೂಂಗೆ ತೆರಳಿ ಆಫೀಸ್ ನಲ್ಲಿ ಕೆಲ ಹೊತ್ತು ಮಾತುಕತೆ ನಡೆಸಿ,ಬಳಿಕ ಕೋಪದಲ್ಲಿ ಹೊರಗೆ ಬಂದು ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ.
ಬೈಕ್ ಸಂಪೂರ್ಣ ಬೆಂಕಿಗೆ ಸುಟ್ಟು ಭಸ್ಮವಾಗಿದ್ದು,ಬಂಟ್ವಾಳ ಅಗ್ನಿಶಾಮಕ ದಳದವರು ಸಕಾಲದಲ್ಲಿ ಆಗಮಿಸಿ ಶೋ ರೂಂ ನಲ್ಲಿ ನಿಲ್ಲಿಸಲಾಗಿದ್ದ ಉಳಿದ ಬೈಕ್ ಗಳಿಗೆ ಬೆಂಕಿ ಹರಡದಂತೆ ನೀರು ಹಾಯಿಸಿ ನಂದಿಸಿದ್ದಾರೆ.ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದ ಅವರು ಕಟ್ಟಡದಲ್ಲಿರುವ ಸಿ.ಸಿ.ಕ್ಯಾಮರಾದ ವಿಡಿಯೋದ ತುಣುಕುಗಳನ್ನು ಪಡೆದುಕೊಂಡಿದ್ದಾರೆ.