ಉಡುಪಿ : ಹಿಜಾಬ್ ಹೋರಾಟದ ನಡುವೆ ದುಷ್ಕೃತ್ಯಕ್ಕೆ ಸಂಚು, ಇಬ್ಬರ ಬಂಧನ
ಉಡುಪಿ ಜಿಲ್ಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ಹೋರಾಟದ ನಡುವೆ ದುಷ್ಕೃತ್ಯಕ್ಕೆ ಸಂಚು ಹೂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಹಿಜಾಬ್ ಹೋರಾಟ ನಡೆಯುತ್ತಿದ್ದಂತೆ ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜು ಸಮೀಪ 6 ಮಂದಿ ಸೇರಿ ಚರ್ಚೆ ಮಾಡುತ್ತಿದ್ದ ವೇಳೆ ಪೊಲೀಸರು ಹಾಜಿ ಅಬ್ದುಲ್ ಮಜಿದ್ ಮತ್ತು ರಜಬ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನುಳಿದ ನಾಲ್ವರು ಎಸ್ಕೇಪ್ ಆಗಿದ್ದಾರೆ.
ಬಂಧಿತ ಆರೋಪಿಗಳ ಕೈಯಿಂದ ಪೊಲೀಸರು ಚಾಕು ವಶಪಡಿಸಿಕೊಂಡಿದ್ದು, ಹೋರಾಟದ ವೇಳೆ ಅಹಿತಕರ ಘಟನೆಗೆ ಪ್ಲಾನ್ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪೊಲೀಸರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಈ ನಡುವೆ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಏಕರೂಪದ ವಸ್ತ್ರಸಂಹಿತೆಯನ್ನು ಸರ್ಕಾರ ಜಾರಿ ಮಾಡಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 133ರ ಅನ್ವಯ ರಾಜ್ಯ ಸರ್ಕಾರದ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಸರ್ಕಾರ ನಿಗದಿ ಮಾಡಿರುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಧರ್ಮದ ಅನುಸಾರ ಆಚರಣೆಗಳನ್ನು ಪಾಲಿಸುತ್ತಿರುವುದು ಕಂಡುಬಂದಿದ್ದು, ಇದರಿಂದ ಸಮಾನತೆ ಮತ್ತು ಏಕತೆಗೆ ಧಕ್ಕೆ ಬರುತ್ತಿರುವುದನ್ನು ಮನಗಂಡು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.