ಸಂಗೀತ ಲೋಕದ ದಂತಕತೆ ಲತಾ ಮಂಗೇಶ್ಕರ್ ಸ್ವರ ಅನಂತದಲ್ಲಿ ಲೀನ | ಮೂಕವಾಯಿತು ಗಾನ ಲೋಕ
ಭಾರತದ ನೈಟಿಂಗೇಲ್, ಸಂಗೀತ ಲೋಕದ ದಂತಕಥೆ ಖ್ಯಾತಿಯ ಗಾಯಕಿ ಲತಾ ಮಂಗೇಶ್ಕರ್ ಅವರು ನಿಧನ ಹೊಂದಿದ್ದಾರೆ ಎಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಅವರು ಇಂದು ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ. ಅವರ ಸಾವಿನ ಸುದ್ದಿಗೆ ಇಡೀ ಭಾರತವೇ ಕಂಬನಿ ಮಿಡಿಯುತ್ತಿದೆ.
ಜನವರಿ 11 ರಂದು ಆಸ್ಪತ್ರೆಗೆ ದಾಖಲಾಗಿದ್ದ 92 ವರ್ಷದ ಭಾರತರತ್ನ ಪುರಸ್ಕೃತೆ ಲತಾ ಮಂಗೇಶ್ಕರ್ ಅವರು ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲತಾ ಅವರು ಕೋವಿಡ್ ಸೋಂಕು ಜೊತೆಗೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇಷ್ಟು ದಿನಗಳವರೆಗೆ ಲತಾ ಜೀ ಅವರು ಐಸಿಯುನಲ್ಲಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿತ್ತು. ಅವರು ಕೊರೊನಾ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಆದ್ದರಿಂದ ಅವರನ್ನು ಆಸ್ಪತ್ರೆಯಲ್ಲಿಯೇ ಇರಬೇಕಾಗಿತ್ತು. ಚಿಕಿತ್ಸೆ ಮುಂದುವರೆಯುತ್ತಿರುವುದರಿಂದ, ಅವರ ಚೇತರಿಕೆಗಾಗಿ ಜನರು ಪ್ರಾರ್ಥಿಸಬೇಕೆಂದು ವೈದ್ಯರು ಕೂಡಾ ಹೇಳಿದ್ದರು. ಅವರನ್ನು ಕಾಣಲು ಬರುವವರಿಗೆ ವೈದ್ಯರು ನಿರ್ಬಂಧ ಕೂಡಾ ಹೇರಿದ್ದರು.
ಇತ್ತೀಚೆಗೆ ಅವರ ಆರೋಗ್ಯದಲ್ಲಿ ಚೇತರಿಕೆ ಕೂಡಾ ಕಂಡುಬಂದಿತ್ತು ಎಂದು ವರದಿಯಾಗಿತ್ತು. ಆದರೆ ಇದೀಗ ಆರೋಗ್ಯ ಹದಗೆಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
1929, ಸೆಪ್ಟೆಂಬರ್ 28 ರಂದು, ಜನಿಸಿದ ಲತಾ ಮಂಗೇಶ್ಕರ್ ಅವರು 1942 ರಲ್ಲಿ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು.
ಕ್ವೀನ್ ಆಫ್ ಮೆಲೊಡಿ, ನೈಟಿಂಗೇಲ್ ಆಫ್ ನಾರ್ಥ್ ಇಂಡಿಯಾ ಮೊದಲಾದ ಬಿರುದುಗಳಿಂದ ಕರೆಯಲ್ಪಡುವ ಭಾರತ್ ಹೆಮ್ಮೆಯ ಗಾಯಕಿ ಲತಾ ಮಂಗೇಶ್ಕರ್ ಅವರು ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳನ್ನ ಪಡೆದಿದ್ದಾರೆ.
1000 ಕ್ಕೂ ಅಧಿಕ ಹಿಂದಿ ಚಿತ್ರಗಳಿಗೆ ಲತಾ ಅವರು ಹಾಡಿದ್ದಾರೆ. ಇಷ್ಟೇ ಅಲ್ಲದೇ ಭಾರತ ಮತ್ತು ವಿದೇಶದ ಹಲವು ಭಾಷೆಗಳು ಸೇರಿ ಒಟ್ಟು 36 ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೆ ಭಾಜನರಾಗಿದ್ದರು.
ಫ್ರಾನ್ಸ್ ನ ಅತ್ಯುತ್ತಮ ನಾಗರಿಕ ಪ್ರಶಸ್ತಿಯನ್ನು ಕೂಡ ಇವರು ಪಡೆದುಕೊಂಡಿದ್ದಾರೆ. ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನೀ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಲತಾಜಿ.
ಲತಾ ಮಂಗೇಶ್ಕರ್ ಅವರು 2001 ರಲ್ಲಿ ‘ ಭಾರತ ರತ್ನ’ ಪ್ರಶಸ್ತಿಗೆ ಭಾಜನರಾದರು. ಎಂ.ಎಸ್.ಸುಬ್ಬಲಕ್ಷ್ಮಿಯವರ ನಂತರ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ ಭಾರತ ರತ್ನ’ ಪಡೆದ ಹಾಡುಗಾರರೆಂದರೆ ಅದು ಲತಾ ಮಂಗೇಶ್ಕರ್.