ಕಳ್ಳತನಕ್ಕೆಂದು ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ಕೈ ಮುಗಿದು ಬರೀ ಕೈಯಲ್ಲೇ ವಾಪಾಸ್ ಆದ ಕಳ್ಳ !!
ಕೆಲವೊಂದು ಕಳ್ಳರು ಅದೆಷ್ಟು ಚತುರರು ಅಂದ್ರೆ ಯಾರು ಇದ್ದರೂ ತಮ್ಮ ಕೆಲಸ ಮಾತ್ರ ನಿಯತ್ತಾಗಿ ಮಾಡಿ ಹೋಗುತ್ತಾರೆ. ದೇವಸ್ಥಾನ ಎಂಬ ಭಯ-ಭಕ್ತಿಯೂ ಇಲ್ಲದೆ ಕಳ್ಳತನ ಮಾಡಿಯೇ ಹೋಗುತ್ತಾರೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರ ಘಟನೆಯೇ ನಡೆದಿದೆ. ಅದೇನಪ್ಪ ಅಂದ್ರೆ ದೇವರ ಮೇಲೆ ಕಣ್ಣ ಹಾಕಿದಾತ ಬಳಿಕ ಮನಸ್ಸು ಬದಲಿಸಿ ಮೌನಿಯಂತೆ ಕೈ ಮುಗಿದು ನಿಂತ ಕಳ್ಳ!
ಹೌದು. ಈ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಹೊರ ವಲಯದ ತಾವರಕೆಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಇಲ್ಲಿನ ಆರ್‌ಬಿಐ ಬಡಾವಣೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇಗುಲವೊಂದರಲ್ಲಿ ತಡ ರಾತ್ರಿ 2 ಗಂಟೆ ಸುಮಾರಿಗೆ ಇಂತದ್ದೊಂದು ಘಟನೆ ನಡೆದಿದೆ.
ಹೀಗೆ ಕಳ್ಳತನ ಮಾಡಲು ಬಂದ ಕಳ್ಳ, ದೇವಾಲಯದ ಬಾಗಿಲನ್ನು ರಾಡ್‌ನಿಂದ ಮುರಿದಿದ್ದಾನೆ. ಬಳಿಕ ದೇಗುಲದ ಒಳಕ್ಕೆ ನುಗ್ಗುತ್ತಾನೆ. ಅಲ್ಲಿ ದೇವರ ವಿಗ್ರಹದ ಮೇಲೆ ಬಂಗಾರದ ಆಭರಣಗಳು ಇರುವುದನ್ನು ನೋಡುತ್ತಾನೆ. ಕಾಣಿಕೆ ಹುಂಡಿಯಲ್ಲಿ ಭಕ್ತರು ಹಾಕಿದ್ದ ಅಪಾರ ಪ್ರಮಾಣದ ಹಣ ಇದೆ ಅನ್ನುವುದನ್ನೂ ಖಚಿತ ಪಡಿಸಿಕೊಳ್ಳುತ್ತಾನೆ. ಇನ್ನೇನು ದೇವರ ಚಿನ್ನ, ಕಾಣಿಕೆ ಹಣ ಕಳ್ಳತನ ಮಾಡಬೇಕು ಅಂತ ಮನಸ್ಸಿನಲ್ಲೇ ಲೆಕ್ಕ ಹಾಕ್ತಾನೆ.ಆದ್ರೆ ಆತನಿಗೆ ಸಡನ್ ಆಗಿ ಏನಾಯ್ತೋ ಏನು ಆತ ತನ್ನ ಪ್ಲಾನ್ ಅನ್ನೇ ಬದಲಾಯಿಸಿಬಿಟ್ಟ. ಬಹುಶಃ ದೇವರ ಮಹಿಮೆನೋ ಏನು? ಆತನಿಗೆ ಗೊತ್ತು!ಒಂದೆರಡು ನಿಮಿಷ ಹಾಗೆಯೇ ನಿಂತಿದ್ದ ಆತ,ತಾನು ಕದಿಯೋಕೆ ಬಂದಿರುವುದು ಅನ್ನುವುದನ್ನೂ ಮರೆತು ದೇವರ ವಿಗ್ರಹದ ಮುಂದೆ ನಿಂತು ವಿಗ್ರಹವನ್ನೇ ನೋಡುತ್ತಾ,ಕೈ ಮುಗಿಯುತ್ತಾ ಮನಸ್ಸಲ್ಲೇ ಪ್ರಾರ್ಥಿಸಿಕೊಳ್ಳುತ್ತಾನೆ.
ಆಭರಣ, ಹಣ ಕದಿಯಲು ದೇವಾಲಯ ಬಾಗಿಲು ಮುರಿದಿರುವ ಅಪರಿಚಿತ ವ್ಯಕ್ತಿ ಕೈ ಮುಗಿದು ವಾಪಸು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವಾಲಯದ ಆಡಳಿತ ಮಂಡಳಿ ಬಾಗಿಲು ತೆಗೆದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸಿಸಿಟಿವಿ ನೋಡಿದಾಗ ಎಲ್ಲವೂ ಗೊತ್ತಾಗಿದೆ. ಈ ಕುರಿತು ತಾವರೆಕೆರೆ ಪೊಲೀಸರಿಗೆ ದೂರು ನೀಡಲಾಗಿದೆ. ಬಾಗಿಲು ಮುರಿದು ಒಳ ಹೋಗಿರುವ ಕಳ್ಳ ದೇವರ ವಿಗ್ರಹದ ಮೇಲಿರುವ ಆಭರಣ, ಹುಂಡಿ ಹಣ ಇವನ್ನೆಲ್ಲ ನೋಡಿದ ಬಳಿಕ , ಅದನ್ನು ಕದಿಯುವ ಗೋಜಿಗೂ ಹೋಗದೆ ಬದಲಾಗಿ ದೇವರಿಗೆ ಕೈ ಮುಗಿದು, ಅಲ್ಲಿಂದ ಬರಿ ಗೈಯಲ್ಲಿ ಯಾಕೆ ಸುಮ್ಮನಾದ? ಎಂಬುದು ಇದೀಗ ಸ್ಥಳೀಯರನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ..