ಉಡುಪಿಯಲ್ಲಿ ಇನ್ನೂ ನಿಲ್ಲುತ್ತಿಲ್ಲ ಹಿಜಾಬ್ ವಿವಾದ | ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗೇಟ್ ಬಳಿಯೇ ತಡೆದ ಕುಂದಾಪುರ ಸರ್ಕಾರಿ ಕಾಲೇಜು ಪ್ರಾಂಶುಪಾಲರು !!

ಇಂದು ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು ಗೇಟ್ ಬಳಿ ತಡೆದ ಘಟನೆ ನಡೆದಿದೆ.

 

ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಡೆದು ಹಿಜಾಬ್ ತೆಗೆದು ತರಗತಿಗೆ ಬರುವಂತೆ ತಿಳಿಸಿದರು. ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದರು. ಈ ಸಂದರ್ಭದಲ್ಲಿ ಗೇಟ್ ಬಳಿ ಪ್ರಾಂಶುಪಾಲರ ಜೊತೆ ವಿದ್ಯಾರ್ಥಿನಿಯರ ವಾಗ್ವಾದ ನಡೆಯಿತು.

ನಾವು ಮೊದಲಿನಿಂದಲೂ ಹಿಜಾಬ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದೇವೆ. ಬೇಕಾದರೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಬರಲಿ. ಸರ್ಕಾರದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ. ಕುಂದಾಪುರ ಸರ್ಕಾರಿ ಕಾಲೇಜಿನ ಉಲ್ಲೇಖವಿದ್ದರೆ ಮಾತ್ರ ನಾವು ಹಿಜಾಬ್ ತೆಗೆಯುತ್ತೇವೆ ಎಂದು ವಿದ್ಯಾರ್ಥಿನಿಯರು ವಾದಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಪ್ರಾಂಶುಪಾಲರು ಸರ್ಕಾರ ಇಡೀ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ 1200ಕ್ಕೂ ಅಧಿಕ ಕಾಲೇಜಿದೆ. ಪ್ರತಿಯೊಂದು ಕಾಲೇಜಿಗೂ ನೋಟಿಸ್ ನೀಡಲು ಆಗುವುದಿಲ್ಲ. ಸರ್ಕಾರ ಏನು ಹೇಳುತ್ತದೋ ಅದನ್ನು ನಾವು ಅನುಸರಿಸುತ್ತೇವೆ ಎಂದು ತಿಳಿಸಿದರು.

ನೂರಾರು ಹಿಂದೂ ವಿದ್ಯಾರ್ಥಿಗಳು ನಿನ್ನೆ ಕೇಸರಿ ಶಾಲುಗಳನ್ನು ತೊಟ್ಟು ಕಾಲೇಜು ಕ್ಯಾಂಪಸ್ ಪ್ರವೇಶಿಸಿದ್ದರು. ಆದರೆ ಇಂದು ಕೇಸರಿ ಶಾಲು ತೊಡದೇ ಕಾಲೇಜಿಗೆ ಹಿಂದೂ ವಿದ್ಯಾರ್ಥಿಗಳು ಬಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಉಸ್ತುವಾರಿ ಸಚಿವ ಎಸ್. ಅಂಗಾರ, ಒಂದೊಂದು ಕಾಲೇಜಿಗೆ ಒಂದೊಂದು ನಿಯಮ ಅಸಾಧ್ಯವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಜೊತೆ ಚರ್ಚಿಸಿ ಸರ್ಕಾರ ಒಂದು ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಈ ರೀತಿಯ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಈ ಬಗ್ಗೆ ಮನವಿ ಮಾಡುತ್ತೇನೆ. ಯಾರು ಕೂಡ ತಮಗೆ ಬೇಕಾದಂತೆ ಕಾಲೇಜಿಗೆ ಬರಲು ಅವಕಾಶವಿಲ್ಲ. ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದೆ. ಜಿಲ್ಲಾಡಳಿತದ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

Leave A Reply

Your email address will not be published.