ಸುಬ್ರಹ್ನಣ್ಯ : ಸ್ವಚ್ಛತಾ ಕಾರ್ಯಕ್ರಮದಲ್ಲಿ ಸರಳತೆ ತೋರಿದ ದ.ಕ.ಜಿ.ಪಂ. ಸಿಇಒ ಡಾ.ಕುಮಾರ್
ಸುಬ್ರಹ್ಮಣ್ಯ : ಕರ್ನಾಟಕ ರಾಜ್ಯ ನರೇಗಾ ನೌಕರರ ಸಂಘ (ರಿ) ಇದರ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಸ್ನಾನ ಘಟ್ಟದಲ್ಲಿ ‘ನರೇಗಾ ದಿವಸ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕುಮಾರಧಾರ ಸ್ನಾನ ಘಟ್ಟವನ್ನು ಸ್ವಚ್ಛತೆ ಮಾಡುವುದರ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.
ಕುಮಾರಧಾರ ಸ್ನಾನಘಟ್ಟದಲ್ಲಿನ ಸ್ವಚ್ಛತಾ ಕಾರ್ಯಕ್ರಮವನ್ನು ದ.ಕ.ಜಿ.ಪಂ. ನ ಸಿಇಒ ಡಾ.ಕುಮಾರ್ ಅವರು ಸ್ವತಃ ನದಿ ತಟದಲ್ಲಿದ್ದ ಭಕ್ತಾಧಿಗಳು ಎಸೆದ ಬಟ್ಟೆ, ಪ್ಲಾಸ್ಟಿಕ್, ನೀರಿನ ಬಾಟಲಿಗಳನ್ನು ವಿಲೇವಾರಿ ಮಾಡುವುದರ ಮೂಲಕ ಸರಳತೆ ಮೆರೆದರು. ಕಸವನ್ನು ಹೆಕ್ಕುವ ಮೂಲಕ ಸ್ನಾನಘಟ್ಟದ ಶುಚಿತ್ವಕ್ಕೆ ಚಾಲನೆ ನೀಡಿದರಲ್ಲದೆ ತ್ಯಾಜ್ಯ ಸಂಗ್ರಹಣ ಕೆಲಸದಲ್ಲಿ ತೊಡಗುವ ಮೂಲಕ ಇತರರಿಗೆ ಮಾದರಿಯಾದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನರೇಗಾ ಸಿಬ್ಬಂದಿ ಗಳು ಜೊತೆಗೂಡಿ ಸ್ನಾನ ಘಟ್ಟದ ಸುತ್ತ-ಮುತ್ತಲು ಭಕ್ತಾಧಿಗಳು ಎಲ್ಲೆಂದರಲ್ಲಿ ಎಸೆದಿದ್ದ ಪ್ಲಾಸ್ಟಿಕ್, ಬಟ್ಟೆ ಸೇರಿದಂತೆ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದರ ಮೂಲಕ ನರೇಗಾ ದಿವಸನ್ನು ಅರ್ಥ ಪೂರ್ಣವಾಗಿ ಆಚರಿಸಿದರು.