ರಾಜ್ಯದ ಪಠ್ಯಪುಸ್ತಕದಲ್ಲಿ ಮಲಯಾಳಂ ನಟನ ಚಿತ್ರ ಬಳಕೆ | ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದ ನಟ | ಸರಕಾರದ ವಿರುದ್ಧ ಡಿ ಕೆ ಸುರೇಶ್ ತರಾಟೆ |
ಮಲಯಾಳಂ ನಟ ಕುಂಚಾಕೋ ಬೋಬನ್ ಅವರ ಪೋಟೋವನ್ನು ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ ಸಿನಿಮಾದಲ್ಲಿ ನಟಿಸಿದ ಪೋಸ್ಟ್ ಮ್ಯಾನ್ ಫೋಟೋವನ್ನು ಬಳಕೆ ಮಾಡಿದ್ದು, ಇದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ನಟ, ನನಗೆ ಕರ್ನಾಟಕ ಸರಕಾರದಿಂದ ಸರಕಾರಿ ಕೆಲಸ ಸಿಕ್ಕಿದೆ ಎಂದಿದ್ದಾರೆ. ಈ ಫೋಟೋವನ್ನು ಮೂಲತಃ ‘ ಒರಿದಾತೊರು ಪೋಸ್ಟ್ ಮ್ಯಾನ್’ ಚಲನಚಿತ್ರದಿಂದ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಟ ಕುಂಚಾಕೋ ಬೋಬನ್ ಟ್ವೀಟ್ ಮಾಡಿ ಸರಕಾರದ ಕಾಲೆಳೆದಿದ್ದಾರೆ. ಪಠ್ಯದ ಪುಟವನ್ನು ತನ್ನ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಬಾಬನ್, ” ಅಂತಿಮವಾಗಿ ಕರ್ನಾಟಕ ಸರಕಾರದಲ್ಲಿ ನನಗೆ ಅಂಚೆಯಣ್ಣನ ಕೆಲಸ ಸಿಕ್ಕಿದೆ. ನನ್ನನ್ನು ಅಂತಹ ಹುದ್ದೆಗೆ ಕೊಂಡೊಯ್ದ ಅಂಚೆಯಣ್ಣನಿಗೆ ಧನ್ಯವಾದ ಹೇಳಲು ಮರೆಯುವುದಿಲ್ಲ” ಎಂದು ಬರೆದಿದ್ದಾರೆ.
ಈಗ ಈ ವಿಚಾರವಾಗಿ ಡಿ ಕೆ ಸುರೇಶ್ ಅವರು ಟ್ವೀಟ್ ಮಾಡಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ಧಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು ಬಿ ಸಿ ನಾಗೇಶ್ ಮತ್ತು ಸುರೇಶ್ ಕುಮಾರ್ ಸ್ಪಷ್ಟಪಡಿಸಬೇಕು. ಸರಕಾರ ತೀವ್ರ ಅಸಡ್ಡೆ ಹಾಗೂ ಅವ್ಯವಸ್ಥೆ ಯಿಂದ ಕರ್ನಾಟಕ ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ತರಗತಿಯೊಂದರ ಪುಸ್ತಕದಲ್ಲಿ ” ಅಂಚೆಯಣ್ಣ” ಎಂಬ ಶೀರ್ಷಿಕೆಗೆ ಮಲಯಾಳಂ ಚಲನಚಿತ್ರ ನಟರ ಫೋಟೋ ಹಾಕಿರುವುದನ್ನು ಟೀಕಿಸಿದ ಡಿ ಕೆ ಸುರೇಶ್ ಅವರ ಅವಸರದ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಅಷ್ಟೊಂದು ಧಾವಂತ ಬೇಡ. ಅವಸರ ವಿವೇಚನೆ ಕಸಿದುಕೊಳ್ಳುತ್ತದೆ. ಇದು ರಾಜ್ಯದ ಶಿಕ್ಷಣ ಇಲಾಖೆ ಪ್ರಕಟಿಸಿರುವ ಅಧಿಕೃ ಪಠ್ಯ ಪುಸ್ತಕವಲ್ಲ, ಇದೊಂದು ಖಾಸಗಿ ಪ್ರಕಾಶಿತ ಪುಸ್ತಕ ಎಂದಿದ್ದಾರೆ.
ಯಾವುದೋ ಖಾಸಗಿ ಸಂಸ್ಥೆಯವರು ಮುದ್ರಿಸಿದ ಪುಸ್ತಕವೊಂದರಲ್ಲಿ ಮಲಯಾಳಿ ನಟನ ಭಾವಚಿತ್ರವನ್ನು ತೋರಿಸಿ, ಇದೊಂದು ಕೇಸರೀಕರಣ ಎಂದು ಬಣ್ಣಿಸುವ ಮಾತಿಗೆ ಅರ್ಥವಿಲ್ಲ. ಇದು ದಾರಿ ತಪ್ಪಿಸುವ ಕೆಲಸ ಎಂದು ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಟೀಕಿಸಿದ್ದಾರೆ.