ಕೇರಳದ ಪ್ರಸಿದ್ಧ ಉರಗ ರಕ್ಷಕ ವಾವಾ ಸುರೇಶ್ ಗೆ ಹಾವು ಕಡಿತ : ಗಂಭೀರ!!
ಕೇರಳದ ಪ್ರಸಿದ್ಧ ಉರಗ ರಕ್ಷಕ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ವಾವಾ ಸುರೇಶ್ ಅವರಿಗೆ ಹಾವು ಕಚ್ಚಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರ ಎಂದು ಹೇಳಲಾಗುತ್ತಿದೆ.
ಸಚಿವ ವಿ ಎನ್ ವಾಸನ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಸೋಮವಾರ ಕೊಟ್ಟಾಯಂ ಸಮೀಪ ನಾಗರ ಹಾವು ರಕ್ಷಣೆ ಮಾಡುವಾಗ ವಾವಾ ಸುರೇಶ್ ( 47) ಗೆ ಕಚ್ಚಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಕೊಟ್ಟಾಯಂ ಸಮೀಪದ ಜನವಸತಿ ಪ್ರದೇಶ ಮೂರು ದಿನದಿಂದ ನಾಗರಹಾವು ಸಂಚಾರ ಮಾಡುತ್ತಿತ್ತು. ಸೋಮವಾರ ಹಾವನ್ನು ರಕ್ಷಣೆ ಮಾಡುವಾಗ ಅದು ವಾವಾ ಸುರೇಶ್ ಬಲಗಾಲಿಗೆ ಕಚ್ಚಿದೆ. ಕೊಟ್ಟಾಯಂನ ಆಸ್ಪತ್ರೆಗೆ ಅವರನ್ನು ತಕ್ಷಣ ದಾಖಲು ಮಾಡಲಾಯಿತು. ಐಸಿಯುನಲ್ಲಿ ವೆಂಟಿಲೇಟರ್ ಸಹಾಯದಲ್ಲಿ ವಾವಾ ಸುರೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ತುಂಬಾ ಸಲ ಹಾವು ರಕ್ಷಣೆ ಮಾಡುವಾಗ ವಾವಾ ಸುರೇಶ್ ಅವರಿಗೆ ಹಾವು ಕಚ್ಚಿದೆ. ಆದರೂ ಅವರು ಹಾವುಗಳ ರಕ್ಷಣಾ ಕಾರ್ಯವನ್ನು ನಿಲ್ಲಿಸಿಲ್ಲ.
ಹಾವನ್ನು ಹಿಡಿದು ಚೀಲಕ್ಕೆ ತುಂಬುವಾಗ ಹಾವು ವಾವಾ ಸುರೇಶ್ ಅವರ ಬಲಗಾಲಿಗೆ ಕಡಿದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅವರಿಗೆ ಪ್ರಜ್ಞೆ ಇರಲಿಲ್ಲ.
ಹಾವು ಹಿಡಿಯುವ ವೀಡಿಯೋ ರೆಕಾರ್ಡ್ ಮಾಡಲಾಗಿದ್ದು, ಅದರಲ್ಲಿ ಹಾವು ಕಚ್ಚುವ ವೀಡಿಯೋ ಕೂಡಾ ಇದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ವಾವಾ ಸುರೇಶ್ ಬೇಗ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ವಾವಾ ಸುರೇಶ್ ಕೇರಳದ ಪ್ರಸಿದ್ಧ ಉರಗ ತಜ್ಞರು. ಸಾಮಾಜಿಕ ಜಾಲತಾಣದಲ್ಲಿಯೂ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ. ಫೇಸ್ಬುಕ್ ನಲ್ಲಿ 2.1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ವಾವಾ ಸುರೇಶ್.