ಒಂದು ಲಕ್ಷ ಸಾಲ ಒಂದು ಕೊಲೆ | ಸಾಲ ತೀರಿಸಲಾಗದೆ ಸ್ನೇಹಿತನನ್ನೇ ಕೊಂದು ಹಾಕಿದ ದಂಪತಿ

ಹಾಸನ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅರಕಲಗೂಡು ತಾಲೂಕು ಕೊಣನೂರಿನ ಲಾಡ್ಜ್ ಯೊಂದರಲ್ಲಿ ಯುವಕನೊಬ್ಬನ ಹತ್ಯೆ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದೆ.

 

ಹಣಕಾಸಿನ ವಿಚಾರದಲ್ಲಿ ಪತಿ- ಪತ್ನಿ ಯುವಕನ ಹತ್ಯೆ ನಡೆಸಿದ್ದಾರೆ ಎಂಬ ವಿಚಾರ ಬಯಲಾಗಿದೆ.

ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕು 6ನೇ ಹೊಸಕೋಟೆ ಗ್ರಾಮದ ದಿಲೀಪ್‌ ಮತ್ತು ಆತನ ಪತ್ನಿ ಸುಶ್ಮಿತಾ ಬೆಂಗಳೂರಿನಲ್ಲಿ ನೆಲಸಿದ್ದರು. ಅದೇ ಹೊಸಕೋಟೆ ಗ್ರಾಮದವನು ಹಾಗೂ ದಿಲೀಪ್‌ನ ಸ್ನೇಹಿತನೂ ಆಗಿದ್ದ ಹರೀಶ್‌ನಿಂದ ದಿಲೀಪ್‌ ಮತ್ತು ಸುಶ್ಮಿತಾ ತನ್ನ ಮಗಳ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಹಣದ ತುರ್ತು ಇದ್ದುದ್ದರಿಂದ 1 ಲಕ್ಷ ಸಾಲ ಪಡೆದಿದ್ದು, ವಾಪಸ್‌ ಕೊಡುವಂತೆ ಹರೀಶ್‌ ಒತ್ತಾಯ ಮಾಡುತ್ತಿದ್ದರಿಂದ ಸಾಲ ಕೊಡಲಾಗದೆ ಆತನನ್ನು ಕೊಲೆ ಮಾಡಲು ದಂಪತಿ ಯೋಜನೆ ರೂಪಿಸಿದ್ದರು.

ಹರೀಶ್‌ಗೆ ಹಣ ನೀಡುವುದಾಗಿ ಸುಶ್ಮಿತಾ ಜ.18 ರಂದು 4 ಗಂಟೆಗೆ ಕೊಣನೂರಿನ ಬಿಎಸ್‌ಪಿ ಲಾಡ್ಜ್ ಗೆ ಬಂದು ನಾನು ಬೆಂಗಳೂರಿನಿಂದ ಕೊಣನೂರಿನ ಸಮೀಪದ ದೇಗುಲದಲ್ಲಿ ಪೂಜೆಗೆ ಬಂದಿದ್ದೇನೆ. ಇನ್ನು ಕೆಲ ಹೊತ್ತಿನಲ್ಲೇ ನನ್ನ ಗಂಡ ಬರುತ್ತಾರೆ. ಇಂದು ತಂಗಿದ್ದು ನಾಳೆ ಹೋಗುತ್ತೇವೆ ಎಂದು ಹೇಳಿ ಲಾಡ್ಜ್ ನಲ್ಲಿ ಕೊಠಡಿ ಪಡೆದುಕೊಂಡಿದ್ದಳು.

ಕೊಠಡಿ ಪಡೆದ ಕೆಲ ಸಮಯ ನಂತರ ಸುಶ್ಮಿತಾ ಕೊಠಡಿಯಿಂದ ಹೊರಹೋಗಿದ್ದಳು. ಆ ಸಂದರ್ಭದಲ್ಲಿ ಸುಶ್ಮಿತಾಳ ಗಂಡ ದಿಲೀಪ್‌ ಆತನ ಸಹೋದರ ಲಕ್ಷ್ಮಣ್‌ ಅದೇ ಲಾಡ್ಜ್ ನಲ್ಲಿ ಮತ್ತೊಂದು ಕೊಠಡಿ ಪಡೆದುಕೊಂಡು ತಂಗಿದ್ದರು. ಕೊಠಡಿಯಿಂದ ಹೊರ ಹೋಗಿದ್ದ ಸುಶ್ಮಿತಾ ಕೆಲ ಹೊತ್ತಿನಲ್ಲಿ ಹರೀಶ್‌ಗೆ ಹಣ ಕೊಡುವುದಾಗಿ ನಂಬಿಸಿ ಆತನನ್ನು ಲಾಡ್ಜ್ ಗೆ ಕರೆದುಕೊಂಡು ಬಂದು ಇವರೇ ನನ್ನ ಗಂಡ ಎಂದು ಲಾಡ್ಜ್ ನವರಿಗೆ ನಂಬಿಸಿ ಕೊಠಡಿಗೆ ಕರೆದುಕೊಂಡು ಹೋಗಿದ್ದಳು.

ಬೇರೆ ಕೊಠಡಿ ಪಡೆದುಕೊಂಡಿದ್ದ ದಿಲೀಪ್‌ ಮತ್ತು ಲಕ್ಷ್ಮಣ್‌ ತಮ್ಮ ಕೊಠಡಿಯಿಂದ ಸುಶ್ಮಿತಾ ಕೊಠಡಿಯ ಶೌಚಾಲಯಕ್ಕೆ ಸುಶ್ಮಿತಾ ಮತ್ತು ಹರೀಶ್‌ ಬರುವ ಮೊದಲೇ ಸೇರಿಕೊಂಡಿದ್ದರು. ಕೊಠಡಿಗೆ ಬಂದ ಹರೀಶ್‌ ನನ್ನು ಕೂರಿಸಿಕೊಂಡು ಸಾಂದರ್ಭಿಕವಾಗಿ ಮಾತ ನಾಡಿಸುತ್ತಿದ್ದ ಸುಶ್ಮಿತಾ ಮೊದಲೇ ತಂದಿಟ್ಟು ಕೊಂಡಿದ್ದ ಕಾರದ ಪುಡಿಯನ್ನು ದಿಢೀರನೇ ಹರೀಶನಿಗೆ ಎರಚಿದ್ದಾಳೆ. ಹರೀಶ್‌ ಕೂಗಿಕೊಳ್ಳುತ್ತಿದ್ದಂತೆ ಶೌಚಾಲಯದಿಂದ ಮಚ್ಚು, ಚಾಕುಗಳೊಂದಿಗೆ ಹೊರ ಬಂದ ದಿಲೀಪ್‌ ಮತ್ತು ಲಕ್ಷ್ಮಣ್‌ ಹರೀಶ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ತಕ್ಷಣವೇ ದಿಲೀಪ್‌ ತನ್ನ ಪತ್ನಿ ಸುಶ್ಮಿತಾಳೊಂದಿಗೆ ಕೊಠಡಿಯಿಂದ ಓಡಿ ಹೋಗಿದ್ದಾನೆ. ಹರೀಶ್‌ನ ಕೂಗಾಟ ಕೇಳಿ ಲಾಡ್ಜ್ ಮಾಲೀಕ ಬಂದು ಕೊಠಡಿಯ ಚಿಲಕ ಹಾಕಿಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ . ಪೊಲೀಸರು ಲಕ್ಷ್ಮಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹರೀಶ್‌ ಮತ್ತು ಸುಶ್ಮಿತಾ ನಡುವೆ ಅಕ್ರಮ ಸಂಬಂಧವಿತ್ತು. ಊರಿನವರಿಗೂ ತಿಳಿದು ಬುದ್ಧಿ ಹೇಳಿದ್ದರು ಎಂದಿದ್ದ. ಆದರೆ, ಅರಕಲ ಗೂಡು ಇನ್‌ಸ್ಪೆಕ್ಟರ್‌ ಸತ್ಯನಾರಾಯಣ ನೇತೃತ್ವದ ಪೊಲೀಸರ ತಂಡವ ತನಿಖೆ ನಡೆಸಿದಾಗ ಹರೀಶ್‌ಗೆ ಕೊಡಬೇಕಾಗಿದ್ದ ಒಂದು ಲಕ್ಷ ರೂ. ಸಾಲ ಕೊಡಲಾಗದೆ ಸಂಚು ರೂಪಿಸಿದ್ದ ಮಾಹಿತಿ ಬಯಲಾಗಿದೆ.

ಈಗ ಪೊಲೀಸರು ದಿಲೀಪ್‌ ಮತ್ತು ಸುಶ್ಮಿತಾಳನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.

Leave A Reply

Your email address will not be published.