ಮುಕ್ಕೂರು : ಪುಸ್ತಕ ಗೂಡು ಉದ್ಘಾಟನೆ
8 ಗ್ರಾ.ಪಂ.ನಲ್ಲಿ ಡಿಜಿಟಲ್ ಗ್ರಂಥಾಲಯ ಸೌಲಭ್ಯ : ಇಓ ಭವಾನಿಶಂಕರ ಎನ್
ಓದುವ ಅಭಿರುಚಿಗೆ ಪೂರಕ ಕಾರ್ಯ :ಗೋಪಾಲಕೃಷ್ಣ ಭಟ್ ಮನವಳಿಕೆ
ಬೆಳ್ಳಾರೆ, ಜ. 26 : ಸುಳ್ಯ ತಾಲೂಕಿನ ಎಂಟು ಗ್ರಾ.ಪಂ.ಗಳಲ್ಲಿ ಡಿಜಿಟಲ್ ಗ್ರಂಥಾಲಯದ ಸೌಲಭ್ಯ ಇದ್ದು, ಇಲ್ಲಿ ಆನ್‍ಲೈನ್ ಮೂಲಕ ಪುಸ್ತಕ ಓದಲು ಅವಕಾಶವಿದೆ. ಗ್ರಾ.ಪಂ. ವ್ಯಾಪ್ತಿಯ ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳನ್ನು ತಂಡ-ತಂಡವಾಗಿ ವಿಭಾಗಿಸಿ ಡಿಜಿಟಲ್ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿ ಪರಿಚಯಿಸುವ ಕಾರ್ಯವು ನಡೆಯುತ್ತಿದೆ ಎಂದು ಸುಳ್ಯ ತಾ.ಪಂ.ಇಓ ಭವಾನಿಶಂಕರ ಎನ್ ಹೇಳಿದರು.
ಪೆರುವಾಜೆ ಗ್ರಾ.ಪಂ.ಆಶ್ರಯದಲ್ಲಿ ಮುಕ್ಕೂರು ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಬುಧವಾರ ಪುಸ್ತಕಗೂಡು ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರಾವಳಿ ಜಿಲ್ಲೆಗಳಲ್ಲಿ ಸರಕಾರಿ ಹುದ್ದೆಗಳಿಗೆ ತೆರಳುವವರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು ಎನ್ನುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಗ್ರಂಥಾಲಯಗಳ ಮೂಲಕ ಒದಗಿಸಲಾಗುತ್ತಿದೆ. ಇದರ ಜತೆಗೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಮೂಡಿಸುವ ಪ್ರಯತ್ನ ಗ್ರಂಥಾಲಯ, ಪುಸ್ತಕ ಗೂಡುವಿನ ಮೂಲಕ ನಡೆಯುತ್ತಿದೆ ಎಂದರು.
ಪೆರುವಾಜೆ ಗ್ರಾ.ಪಂ.ಗೆ
ಗ್ರಂಥಾಲಯ ಸೌಲಭ್ಯ
ಪೆರುವಾಜೆ ಗ್ರಾ.ಪಂ.ಗೆ ಶೀಘ್ರವಾಗಿ ಗ್ರಂಥಾಲಯ ಮೇಲ್ವಿಚಾರಕ, ಗ್ರಂಥಾಲಯ ಮಂಜೂರುಗೊಳ್ಳಲಿದೆ. ಈ ಬಗ್ಗೆ ಸಿಎಸ್ ಭರವಸೆ ನೀಡಿದ್ದು, ಪ್ರಸ್ತಾವನೆ ರಾಜ್ಯ ಗ್ರಂಥಾಲಯ ಇಲಾಖೆಯಲ್ಲಿ ಇದೆ ಎಂದ ಅವರು ಪೆರುವಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಇನ್ನೂ ಹಲವಡೆ ಪುಸ್ತಕಗೂಡು ರಚನೆಯಾಗಿ ಸಾರ್ವಜನಿಕರಲ್ಲಿ ಓದುವ ಹವ್ಯಾಸ ವೃದ್ಧಿಸಲು ಸಹಕಾರಿಯಾಗಲಿ ಎಂದು ಭವಾನಿಶಂಕರ ಹೇಳಿದರು.
ಪುಸ್ತಕಗೂಡು ಲೋಕಾರ್ಪಣೆಗೊಳಿಸಿದ ಸಾಹಿತಿ, ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಮನವಳಿಕೆ ಮಾತನಾಡಿ, ಓದುವ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಪುಸ್ತಕಗೂಡು ಯೋಜನೆ ಮಹತ್ವದ್ದು. ಸದುದ್ದೇಶದಿಂದ ಆರಂಭಿಸಿದ ಈ ಪ್ರಯತ್ನಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ಮುಂಬರುವ ದಿನಗಳಲ್ಲಿ ಮುಕ್ಕೂರಿನಲ್ಲಿ ಪುಸ್ತಕ ಗೂಡು, ಓದುವ ಹವ್ಯಾಸಕ್ಕೆ ಬೆಂಬಲವಾಗಿ ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಒದಗಿಸುವ ಕಾರ್ಯ ಗ್ರಾ.ಪಂ.ಮೂಲಕ ಆಗಬೇಕು ಎಂದರು.
ಪೆರುವಾಜೆ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ಉತ್ತಮ ಉದ್ದೇಶ ಇರಿಸಿಕೊಂಡು ಅನುಷ್ಠಾನಗೊಂಡಿರುವ ಪುಸ್ತಕಗೂಡಿನ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವ ಮೂಲಕ ಓದುವ ಹವ್ಯಾಸ ವೃದ್ಧಿಯಾಗಲಿ ಎಂದರು.
ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಊರಿನ ಚಟುವಟಿಕೆಗೆ ಪೂರಕವಾಗಿ ಪುಸ್ತಕಗೂಡು ಅನುಷ್ಠಾನಿಸಲಾಗಿದೆ. ಇದರ ಜೋಡಣೆಯ ಹಿಂದೆ ಶ್ರಮಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ನಡೆಯುವ ಇಂತಹ ಕಾರ್ಯಕ್ಕೆ ಪ್ರತಿಯೋರ್ವರು ಸಹಕಾರ ನೀಡಬೇಕು. ಪುಸ್ತಕಗೂಡು ಸೌಲಭ್ಯಗಳು ಇಂದಿನ ಕಾಲದ ಮಕ್ಕಳಿಗೆ ಸಿಕ್ಕ ಒಳ್ಳೆಯ ಅವಕಾಶ ಎಂದರು.
ಸಭಾಕಾರ್ಯಕ್ರಮದ ಪ್ರಾರಂಭದಲ್ಲಿ ಮುಕ್ಕೂರು ಬಸ್ ನಿಲ್ದಾಣದಲ್ಲಿ ಪುಸ್ತಕಗೂಡು ಉದ್ಘಾಟಿಸಲಾಯಿತು. ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು ಸಭಾಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಸಚಿನ್‍ರಾಜ್ ಶೆಟ್ಟಿ, ಮಾಧವ, ರೇವತಿ ಮಠತ್ತಡ್ಕ, ಶಹನಾಜ್, ಕವಯತ್ರಿ ಅಶ್ವಿನಿ ರಾಮಚಂದ್ರ ಕೋಡಿಬೈಲು, ಪ್ರಗತಿಪರ ಕೃಷಿಕರಾದ ಮೋಹನ್ ಬೈಪಡಿತ್ತಾಯ, ನೋಟರಿ ನ್ಯಾಯವಾದಿ ಬಾಬು ಗೌಡ ಅಡ್ಯತಕಂಡ, ಪಿಡಿಓ ಜಯಪ್ರಕಾಶ್, ಪೆರುವಾಜೆ ಭಾವೈಕ್ಯ ಯುವಕ ಮಂಡಲದ ಗೌರವಾಧ್ಯಕ್ಷ ಜಯಪ್ರಕಾಶ್ ರೈ ಪೆರುವಾಜೆ, ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ, ಮುಕ್ಕೂರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಉಪಸ್ಥಿತರಿದ್ದರು. ನೇಸರ ಯುವಕ ಮಂಡಲದ ಸದಸ್ಯ ಜೀವನ್ ಕೊಂಡೆಪ್ಪಾಡಿ ಸ್ವಾಗತಿಸಿ, ಶಿಕ್ಷಕ ಶಶಿಕುಮಾರ್ ಬಿ.ಎನ್.ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.
ದಾನಿಗಳಿಗೆ ಗೌರವಾರ್ಪಣೆ
ಈ ಸಂದರ್ಭದಲ್ಲಿ ಮುಕ್ಕೂರು ಶಾಲೆಗೆ ಕೊಳವೆಬಾವಿ ಪಂಪ್ ನೀಡಿದ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ ಸುಬ್ರಾಯ ಭಟ್ ನೀರ್ಕಜೆ, ಕುಂಬ್ರ ದಯಾಕರ ಆಳ್ವ,ಯತೀಶ್ ಕಾನಾವುಜಾಲು, ಗುಣಶ್ರೀ ಬೀರುಸಾಗು ಅವರನ್ನು ಎಸ್‍ಡಿಎಂಸಿ ಅಧ್ಯಕ್ಷರ ಪರವಾಗಿ ಅತಿಥಿಗಳು ಗೌರವಿಸಿದರು.
ರಸಪ್ರಶ್ನೆ ವಿಜೇತರಿಗೆ
ಬಹುಮಾನ ವಿತರಣೆ
ಪುಸ್ತಕಗೂಡು ಉದ್ಘಾಟನೆ ಹಿನ್ನೆಲೆಯಲ್ಲಿ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿಜೇತರಾದ ಪುಣ್ಯ ಕುಂಡಡ್ಕ, ಆತ್ಮೀಯ ಕೋಡಿಬೈಲು, ವಂಶಿಕ್ ಪಿ, ಆಯಿಷತ್ ಶಹನಾ ಎಂ.ಎಚ್., ಪ್ರೌಢಶಾಲಾ ವಿಭಾಗದಲ್ಲಿ ಅವನಿ ಕೋಡಿಬೈಲು, ವಿಸ್ತೃತ ತೋಟದಮೂಲೆ, ಸಾರ್ವಜನಿಕ ವಿಭಾಗದಲ್ಲಿ ರಾಧಾಕೃಷ್ಣ ರೈ ಕನ್ನೆಜಾಲು, ದೇವಕಿ ಪಿ.ಮುಕ್ಕೂರು ಇವರಿಗೆ ಬಹುಮಾನ ವಿತರಿಸಲಾಯಿತು.