ಬಿ.ಸಿ.ರೋಡು -ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2023ಕ್ಕೆ ಸಂಚಾರಕ್ಕೆ ಮುಕ್ತಗೊಳ್ಳುವ ವಿಶ್ವಾಸ- ನಳಿನ್ ಕುಮಾರ್
ಬಂಟ್ವಾಳ: ಬಿ.ಸಿ.ರೋಡು -ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಹಿಂದಿನ ವಿನ್ಯಾಸವನ್ನು ಪರಿವರ್ತನೆ ಮಾಡಿಕೊಂಡು ಹೊಸ ಟೆಂಡರ್ ಮೂಲಕ 2 ಕಂಪೆನಿಗಳಿಂದ ವೇಗವಾಗಿ ಕಾಮಗಾರಿ ಆರಂಭಗೊಂಡಿದ್ದು, 2023ರಲ್ಲಿ ಸುಸಜ್ಜಿತ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳ್ಳುವ ವಿಶ್ವಾಸವಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಸೋಮವಾರ ಸಚಿವ ಎಸ್. ಅಂಗಾರ ಹಾಗೂ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಜತೆಗೆ ಬಿ.ಸಿ.ರೋಡಿನಿಂದ ಕಲ್ಲಡ್ಕವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲಿಸಿ ಬಳಿಕ ಪತ್ರಕರ್ತರ ಜತೆ ಮಾತನಾಡಿದರು.
ಹೆದ್ದಾರಿ ಕಾಮಗಾರಿ ಸಂದರ್ಭ ಕುಡಿಯುವ ನೀರು, ವಿದ್ಯುತ್ ಮೊದಲಾದ ಸಮಸ್ಯೆಗಳಾಗುವುದು ಸಹಜ. ಅದನ್ನು ನಿವಾರಿಸಿಕೊಂಡು ಕಾಮಗಾರಿ ವೇಗವಾಗಿ ಸಾಗುತ್ತದೆ. ಪಾಣೆಮಂಗಳೂರು, ಉಪ್ಪಿನಂಗಡಿ ಯಲ್ಲಿ ಸೇತುವೆಗಳು, ಕಲ್ಲಡ್ಕದಲ್ಲಿ ದೇಶದಲ್ಲೇ ಅಪೂರ್ವವಾದ 6 ಲೇನ್ ಫ್ಲೆ$çಓವರ್ ನಿರ್ಮಾಣಗೊಳ್ಳಲಿದೆ. 15 ದಿನಗಳೊಗೊಮ್ಮೆ ಪ್ರಗತಿ ಪರಿಶೀಲನ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗುತ್ತದೆ. ಈ ಹಿಂದೆ ತಲಪಾಡಿ-ಹೆಜಮಾಡಿ ಕಾಮಗಾರಿ ಸಂದರ್ಭದಲ್ಲೂ ಇದೇ ರೀತಿ ಮಾಡಿದ್ದೆವು ಎಂದರು.
ಬಿಕರ್ನಕಟ್ಟೆ-ಸಾಣೂರು ಕಾಮಗಾರಿಗೆ ಟೆಂಡರ್
ಜಿಲ್ಲೆಯ ಎಲ್ಲ ಹೆದ್ದಾರಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗಿದ್ದು, ಬಿಕರ್ನಕಟ್ಟೆಯಿಂದ ಸಾಣೂರು ವರೆಗಿನ ಕಾಮಗಾರಿಗೆ ಈಗಾಗಲೇ ಟೆಂಡರ್ ಆಗಿದೆ. ಶಾಸಕ ರಾಜೇಶ್ ನಾೖಕ್ ನೇತೃತ್ವದಲ್ಲಿ ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ ವರೆಗಿನ ಕಾಮಗಾರಿ ವೇಗವಾಗಿ ಸಾಗಿದ್ದು, ಶೀಘ್ರದಲ್ಲಿ ಚಾರ್ಮಾಡಿ ವರೆಗೂ ಮುಂದುವರಿಯಲಿದೆ. ಗುಂಡ್ಯ ವರೆಗಿನ ಗೆದ್ದಾರಿಗಳ ಹೊಂಡ ಮುಚ್ಚಲಾಗಿದ್ದು, ಸಕಲೇಶಪುರ ಭಾಗದ ಹೆದ್ದಾರಿ ಅವ್ಯವಸ್ಥೆಯ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಅದಕ್ಕೂ ವಿಶೇಷ ಅನುದಾನಕ್ಕಾಗಿ ಹೆದ್ದಾರಿ ಖಾತೆ ಸಚಿವ ಗಡ್ಕರಿ ಅವರ ಜತೆ ಚರ್ಚಿಸಲಾಗಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿರಾಡಿ: ಪರ್ಯಾಯ ಕ್ರಮಕ್ಕೆ ಸೂಚನೆ
ದ.ಕ. ಜಿಲ್ಲೆಯ ಶಿರಾಡಿ ಮೂಲಕ ಸಾಗುವ ಬೆಂಗಳೂರು ರಸ್ತೆಯು ಜಿಲ್ಲೆಯ ಆರ್ಥಿಕ ವ್ಯವಹಾರದ ಜೀವನಾಡಿಯಾಗಿರುವುದರಿಂದ ಈ ಹೆದ್ದಾರಿಯನ್ನು ದುರಸ್ತಿಗಾಗಿ 6 ತಿಂಗಳು ಬಂದ್ ಮಾಡುವ ಬದಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಕಾಮಗಾರಿ ಮುಂದುವರಿಸುವಂತೆ ತಿಳಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಅದನ್ನು ವೀಕ್ಷಿಸಿ ಪರ್ಯಾಯ ವ್ಯವಸ್ಥೆಯ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ನಳಿನ್ ತಿಳಿಸಿದರು.