ಪೂರ್ವ ಆಫ್ರಿಕಾದ ಬುರ್ಕಿನ ಪಾಸೋ ದೇಶ ಮಿಲಿಟರಿ ಪಡೆಯ ವಶಕ್ಕೆ | ಅಧ್ಯಕ್ಷ ರೋಚ್ ಕಬೋರ್ ನ ಪದುಚ್ಯುತಗೊಳಿಸಿ ಬಂಧನ
ಕ್ರಿಪ್ರ ಕ್ರಾಂತಿಯ ಮೂಲಕ ಪೂರ್ವ ಆಫ್ರಿಕಾದ ಬುರ್ಕಿನಾ ಪಾಸೊ ಅಧ್ಯಕ್ಷ ರೋಚ್ ಕಬೋರ್ ಅವರನ್ನು ಪದಚ್ಯುತಗೊಳಿಸಿದ ನಂತರ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಮಿಲಿಟರಿ ಪಡೆ ಘೋಷಿಸಿದೆ.
ಅಧ್ಯಕ್ಷ ರೋಚ್ ಅವರು ಹತ್ಯೆಯ ಯತ್ನದಿಂದ ಪಾರಾಗಿದ್ದು, ಕ್ರಿಪ್ರ ಕ್ರಾಂತಿಯಲ್ಲಿ ಸೇನೆ ದೇಶವನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಬರ್ಕಿನಾ ಪಾಸೊ ಆಡಳಿತಾರೂಢ ಪಕ್ಷ ತಿಳಿಸಿದೆ.
ಇಸ್ಲಾಮಿಸ್ಟ್ ಬಂಡುಕೋರರ ಬಂಡಾಯವನ್ನು ಮಟ್ಟಹಾಕುವಲ್ಲಿ ಅಧ್ಯಕ್ಷ ರೋಚ್ ವಿಫಲರಾಗಿರುವುದಾಗಿ ಪಕ್ಷ ಆರೋಪಿಸಿದೆ.
ಸಂವಿಧಾನವನ್ನು ಅಮಾನತುಗೊಳಿಸಿ, ಸಂಸತ್ ಹಾಗೂ ಸರ್ಕಾರವನ್ನು ವಿಸರ್ಜಿಸಿದ್ದೇವೆ. ಸೋಮವಾರ ಮಧ್ಯರಾತ್ರಿಯಿಂದಲೇ ದೇಶದ ಗಡಿಭಾಗಗಳನ್ನು ಮುಚ್ಚಲಾಗಿದೆ ಎಂದು ಕಿರಿಯ ಅಧಿಕಾರಿಯೊಬ್ಬರು ಲೆಫ್ಟಿನೆಂಟ್ ಕರ್ನಲ್ ಪೌಲ್ ಹೆನ್ಸಿ ಸಹಿ ಹಾಕಿರುವ ಪ್ರಕಟಣೆಯ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಪೂರ್ವ ಆಫ್ರಿಕಾದ ಬುರ್ಕಿನಾ ಪಾಸೊ ದೇಶದಲ್ಲಿ ಗಲಭೆ, ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹೊಸ ಆಡಳಿತದ ರಚನೆ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಔಗಾಡೌಗೌನಲ್ಲಿ ಕ್ರಿಪ್ರ ಕ್ರಾಂತಿಯ ನಂತರ ನೂರಾರು ಮಂದಿ ಜಮಾಯಿಸಿ ಸಂಭ್ರಮಾಚರಣೆ ನಡೆಸಿ, ದೇಶದ ಬಾವುಟವನ್ನು ಪ್ರದರ್ಶಿಸಿದ್ದರು. ರಾಜಧಾನಿ ಔಗಾಡೌಗೌ ನಲ್ಲಿರುವ ಅಧ್ಯಕ್ಷ ರೋಚ್ ಅವರ ನಿವಾಸದ ಬಳಿ ರಾತ್ರಿಯಿಡೀ ನಡೆದ ಗುಂಡಿನ ಕಾಳಗದ ಬಳಿಕ ಅಧ್ಯಕ್ಷ ರೋಚ್ ಅವರನ್ನು ಸೇನೆ ಬಂಧಿಸಿರುವುದಾಗಿ ಭದ್ರತಾ ಪಡೆ ಮೂಲಗಳು ತಿಳಿಸಿವೆ.
ಶಸ್ತ್ರಧಾರಿ ಹಾಗೂ ಮಾಸ್ಕ್ ಧರಿಸಿದ ವ್ಯಕ್ತಿಗಳು ಸರ್ಕಾರದ ರೇಡಿಯೋ ಹಾಗೂ ಟೆಲಿವಿಷನ್ ಕೇಂದ್ರಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿ ವಿವರಿಸಿದೆ. ದೇಶ ಮಿಲಿಟರಿ ವಶಕ್ಕೆ ಪಡೆದ ನಂತರ ಅಧ್ಯಕ್ಷ ರೋಚ್ ಈವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ, ಅಲ್ಲದೇ ರೋಚ್ ಅವರನ್ನು ಎಲ್ಲಿ ಬಂಧಿಸಿ ಇಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿಲ್ಲ ಎಂದು ವರದಿ ಹೇಳಿದೆ.