ಶೈಕ್ಷಣಿಕ ಪ್ರಮಾಣಪತ್ರಗಳ ಪೂರೈಕೆಗೆ ‘ ಇ- ಸಹಮತಿ’ ಗೆ ಉನ್ನತ ಶಿಕ್ಷಣ ಸಚಿವ ಚಾಲನೆ | ವಿಶ್ವವಿದ್ಯಾಲಯಗಳಲ್ಲಿ ಸುಗಮಾ ಪರೀಕ್ಷಾ ವ್ಯವಸ್ಥೆಗೆ ತಂತ್ರಾಂಶ

ಬೆಂಗಳೂರು : ಪರೀಕ್ಷಾ ತಂತ್ರಾಂಶ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರ ಇತ್ಯಾದಿಗಳನ್ನು ಸುಗಮವಾಗಿ ಒದಗಿಸುವ ‘ಇ ಸಹಮತಿ’ ಉಪಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಇಂದು ಚಾಲನೆ ನೀಡಿದರು.

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ ಯೋಜನೆಯಡಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. 10 ಮಾಡ್ಯೂಲ್ ಗಳನ್ನು ಒಳಗೊಂಡಿರುವ ಈ ಯೋಜನೆಯಡಿ 2021 ರ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ ಪ್ರವೇಶಾತಿ ಮತ್ತು ಶೈಕ್ಷಣಿಕ ಹಾಗೂ ತರಗತಿ ನಿರ್ವಹಣೆ ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಉಳಿದವುಗಳನ್ನು ಜೂನ್ ನಲ್ಲಿ ಅಳವಡಿಸಲಾಗುವುದು. ಇಂಥ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದು ಹೇಳಿದರು.

ಈ ತಂತ್ರಜ್ಞಾನದಿಂದ ವಿವಿಗಳು ಪರೀಕ್ಷೆ ಮತ್ತು ಅಂಕಪಟ್ಟಿಗಳ ಬಾಬ್ತಿಗೆಂದು ಖರ್ಚು ಮಾಡುತ್ತಿದ್ದ ಸುಮಾರು 60 ಕೋಟಿ ಹಣ ಉಳಿತಾಯವಾಗುತ್ತದೆ. ನಕಲಿ ಅಂಕಪಟ್ಟಿ , ಪ್ರಮಾಣಪತ್ರಗಳ ದಂಧೆಗೆ ಕಡಿವಾಣ ಬೀಳಲಿದೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಬಹುಶಿಸ್ತೀಯ ಪಠ್ಯಕ್ರಮವನ್ನು ಇಲ್ಲಿ ಅಳವಡಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದರೆ, ಅಥವಾ ಮರುಪ್ರವೇಶ ಇಷ್ಟಪಟ್ಟಲ್ಲಿ ಅದರ ವ್ಯವಸ್ಥೆ ಕೂಡ ಈ ತಂತ್ರಾಂಶ ಇದರಲ್ಲಿದೆ. ಪ್ರಮಾಣಪತ್ರಗಳನ್ನು ಅಗತ್ಯವೆನಿಸಿದಾಗ ಪಡೆಯಬಹುದು ಎಂದು ಹೇಳಿದರು.

ಸರಕಾರಿ ಸ್ವಾಮ್ಯದ 24 ವಿವಿಗಳ ಪೈಕಿ ಎರಡು ವಿವಿಗಳು ತಮ್ಮದೇ ಆದ ಪರೀಕ್ಷಾ ನಿರ್ವಹಣೆಯ ತಂತ್ರಾಂಶಗಳನ್ನು ಹೊಂದಿದ್ದರೆ 8 ವಿವಿಗಳಲ್ಲಿ ಯಾವುದೇ ಪರೀಕ್ಷಾ ತಂತ್ರಾಂಶಗಳಿಲ್ಲ. ಮಿಕ್ಕ ವಿ ವಿಗಳು ಇದಕ್ಕೆಲ್ಲಾ ಹೊರಗುತ್ತಿಗೆಯನ್ನು ಅವಲಂಬಿಸಿದ್ದವು. ಪ್ರಯೋಗಾಲಯಗಳ ಬ್ಯಾಚ್ ನಿರ್ವಹಣೆ, ಪರೀಕ್ಷಾ ಶುಲ್ಕ ಪಾವತಿ, ಪ್ರವೇಶ ಪತ್ರ, ಮೌಲ್ಯಮಾಪನ, ಡಿಜಿಟಲ್ ಮೌಲ್ಯಮಾಪನ, ವೇಳಾಪಟ್ಟಿ, ಅಂಕಪಟ್ಟಿ ಪೂರೈಕೆ ಮುಂತಾದವುಗಳೆಲ್ಲ ಈಗ ಅಭಿವೃದ್ಧಿ ಪಡಿಸಿರುವ ಪರೀಕ್ಷಾ ನಿರ್ವಹಣಾ ತಂತ್ರಾಂಶದ ಮೂಲಕ ಸಾಧ್ಯವಾಗಲಿದೆ. ಇದರಿಂದ ಇನ್ನೊಂದು ಉಪಯೋಗ ಏನೆಂದರೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಹೊರೆ ಕಡಿಮೆಯಾಗುತ್ತದೆ.

‘ಇ ಸಹಮತಿ’ ತಂತ್ರಾಂಶದ ಮೂಲಕ ಪರೀಕ್ಷೆಗೆ ಸಂಬಂಧಿಸಿದ ಡೇಟಾವನ್ನು ನ್ಯಾಷನಲ್ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಎನ್ ಎಬಿಸಿ( ರಾಷ್ಟ್ರೀಯ ಶೈಕ್ಷಣಿಕ ಸಾಧನಾ ಭಂಡಾರ) ಗೆ ಸೇರಿಸಲು ಹಾಗೂ ಉದ್ಯೋಗಧಾತರ ಜೊತೆಗೆ ಅಂಕಪಟ್ಟಿ ಕೊಡಲು ಇದರಲ್ಲಿ ಅವಕಾಶ ನೀಡಲಾಗಿದೆ. ಎನ್ಕ್ರಿಪ್ಟೆಡ್ ರೂಪದಲ್ಲಿ ಇವೆಲ್ಲವೂ ಇರಲಿದೆ. ಡಿಜಿಲಾಕರ್ ಎನ್ ಎಡಿ ಗೆ ಪ್ರತೀ ಸೆಮಿಸ್ಟರಿನ ಅಂಕಪಟ್ಟಿಯನ್ನು ನೇರವಾಗಿ ವರ್ಗಾಯಿಸಬಹುದು. ಈ ತಂತ್ರಾಂಶದಲ್ಲಿ ಭದ್ರತೆ ಹಾಗೂ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಶ್ವತ್ಥ್ ನಾರಾಯಣ ಹೇಳಿದರು.

Leave A Reply

Your email address will not be published.