ಸ್ನಾತಕ ಪದವಿಯಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಎಂಬ ನಿಯಮವನ್ನು ಕೈಬಿಟ್ಟ -ರಾಜ್ಯ ಸರ್ಕಾರ
ಬೆಂಗಳೂರು :ಪದವಿ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಕನ್ನಡ ವಿಷಯ ಒಂದು ಕಡ್ಡಾಯವಾಗಿತ್ತು. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸ್ನಾತಕ ಪದವಿಯಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಎಂಬ ನಿಯಮವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಹೈಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು,ಸ್ನಾತಕ ಪದವಿಯಲ್ಲಿ ವಿದ್ಯಾರ್ಥಿಗಳು ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲು ಇಚ್ಚಿಸದಿದ್ದರೆ ನ್ಯಾಯಾಲಯದ ಅಂತಿಮ ಆದೇಶವಾಗುವವರೆಗೂ ಅದನ್ನು ಕಡ್ಡಾಯಗೊಳಿಸದಂತೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2021-22 ನೇ ಸಾಲಿನಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಲ್ಲಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಎನ್ ಇಪಿ ಆಶಯದಂತೆ ಸ್ಥಳೀಯ ಭಾಷೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಎಲ್ಲಾ ವಿವಿ ಮತ್ತು ಪದವಿ ಕಾಲೇಜುಗಳಲ್ಲಿ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಎರಡು ವರ್ಷ ಒಂದು ಭಾಷೆಯಾಗಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಸರ್ಕಾರದ ಈ ಕ್ರಮಕ್ಕೆ ಕೆಲವು ಖಾಸಗಿ ಪದವಿ ಕಾಲೇಜುಗಳು, ವಿವಿಗಳಿಂದ ವಿರೋಧ ಕೇಳಿಬಂದಿತ್ತು. ಹೀಗಾಗಿ ರಾಜ್ಯ ಸರ್ಕಾರ ಪಿಯುಸಿ ಹಂತದಲ್ಲಿ ಕನ್ನಡ ಅಭ್ಯಾಸ ಮಾಡದ ವಿದ್ಯಾರ್ಥಿಗಳು ಹಾಗೂ ಹೊರ ರಾಜ್ಯ, ಹೊರ ದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಡ್ಡಾಯ ಕಲಿಕೆಯನ್ನು ಕೈಬಿಟ್ಟಿದೆ ಎನ್ನಲಾಗಿದೆ.