ಸರಕಾರಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಪ್ರತ್ಯೇಕ ಕೊಠಡಿ ನೀಡಿದ ಶಿಕ್ಷಕಿ !! ತನಿಖೆಗೆ ಆದೇಶ ನೀಡಿದ ಶಾಸಕ

ಪ್ರತೀ ಶಾಲೆಯಲ್ಲಿ ಭಾವೈಕ್ಯತೆ ಮೂಡುವಂತಹ ವಾತಾವರಣ ಸೃಷ್ಟಿಯಾಗಬೇಕೇ ಹೊರತು ಬೇರೆ ಬೇರೆ ಧರ್ಮಗಳ ಪಾಠ ಆಗಬಾರದು. ಒಂದು ವೇಳೆ ಈ ರೀತಿಯಾದರೆ ಮಕ್ಕಳಲ್ಲೇ ಬೇಧ ಭಾವ ಮೂಡಲು ಶುರುವಾಗುತ್ತದೆ. ಇಂಥದ್ದೇ ಒಂದು ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿರುವ ಸೋಮೇಶ್ವರ ಪಾಳ್ಯದ ಬಳೇಚಂಗಪ್ಪ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಇಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಅವಕಾಶ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಪ್ರತಿ ಶುಕ್ರವಾರ ಸರಕಾರಿ ಶಾಲೆಯ ಪ್ರತ್ಯೇಕ ಕೊಠಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ನಮಾಜ್ ಮೂಲಕ ಪ್ರಾರ್ಥನೆ ಮಾಡುತ್ತಿದ್ದರು. ನಮಾಜ್ ಮಾಡಲು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ಶಿಕ್ಷಕರು ನೀಡಿದ್ದರು. ಪ್ರತಿ ಶುಕ್ರವಾರ ಮಧ್ಯಾಹ್ನ 12 ರಿಂದ 1.30 ರವರೆಗೂ ನಮಾಜ್ ಗೆ ಅವಕಾಶ ನೀಡಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಶಾಲಾ ಮಕ್ಕಳ ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಮುಳಬಾಗಿಲು ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ವಾಸವಿದ್ದು, ಎಂದಿನಂತೆ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗಾಗಿಯೇ ವಿದ್ಯಾರ್ಥಿಗಳು ನಮಾಜ್ ಮಾಡಲೆಂದು, ಶುಕ್ರವಾರ ಇಡೀ ದಿನ ಶಾಲೆಗೆ ಬರುತ್ತಿರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಗೈರು ಹಾಜರಾಗುವುದನ್ನು ತಪ್ಪಿಸಲು ಈ ರೀತಿ ಮಾಡಿದ್ದಾಗಿ ಸಮರ್ಥನೆ ನೀಡಿದ್ದಾರೆ.

ಈ ಕ್ರಮವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಮುಳಬಾಗಿಲು ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ. ಶಿಕ್ಷಕರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದೆ‌. ಶಾಲೆಯಲ್ಲಿ ಇತರ ಧರ್ಮಗಳ ಮಕ್ಕಳು ಪಾಠ ಕೇಳಲು ಬರುತ್ತಿದ್ದು, ಎಂದೂ ಪ್ರತ್ಯೇಕವಾಗಿ ಧರ್ಮದ ಆಚರಣೆಗೆ ಅವಕಾಶ ನೀಡಿಲ್ಲ. ಆದರೆ ಶಿಕ್ಷಕರೇ ಅನುಮತಿ ನೀಡಿ ಒಂದು ಪ್ರತ್ಯೇಕ ಕೊಠಡಿ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ದೇವಿ, ನಮಾಜ್ ಗೆ ಅನುಮತಿ ನೀಡಿದ ಶಾಲಾ ಶಿಕ್ಷಕಿ ಉಮಾದೇವಿ ಅವರನ್ನು ತಕ್ಷಣವೇ ಅಮಾನತು ಮಾಡುವುದಾಗಿ ಹೇಳಿದ್ದಾರೆ.

ಮುಳಬಾಗಿಲು ಶಾಸಕರಾದ ಎಚ್ ನಾಗೇಶ್ ಶಾಲೆಯಲ್ಲಿ ಮುಸ್ಲಿಂ ಸಮುದಾಯದ ಮಕ್ಕಳ ಪ್ರಾರ್ಥನೆಗೆ ಅವಕಾಶ ನೀಡಿದ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ‌ನಡೆಸಿ ಮಾಹಿತಿ ‌ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಕ್ಕಳ ನಮಾಜ್ ಬಗ್ಗೆ ಇನ್ನೂ ಮುಸ್ಲಿಂ ಧರ್ಮಗುರುಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave A Reply

Your email address will not be published.