ಇಂಡೋನೇಷ್ಯಾ ರಾಜಧಾನಿಗೆ ಮುಳುಗುವ ಭೀತಿ | 30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ..!
ಮಹತ್ವದ ಬೆಳವಣಿಗೆಯಲ್ಲಿ ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಿಸಲು ಹೊರಟಿದೆ. ಈಗಿರುವ ಜಕಾರ್ತದಿಂದ 2,000 ಕಿ.ಮೀ. ದೂರದಲ್ಲಿರುವ ನುಸಂತರಾ ಗೆ ಸ್ಥಳಾಂತರಿಸಲು ನಿರ್ಧರಿಸಿದೆ.
ಈ ವರ್ಷದಿಂದಲೇ ಮೊದಲ ಹಂತದ ಕಾಮಗಾರಿ ಶುರುವಾಗಲಿದೆ.
ಇನ್ನು ಮೂವತ್ತು ವರ್ಷಗಳಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ. ತಾಪಮಾನ ಏರಿಕೆಯಿಂದಾಗಿ ಸಮುದ್ರದ ಮಟ್ಟ ಏರಲಿದೆ. ಇದಕ್ಕೆ ಬಲಿಯಾಗುವ ಮೊದಲ ನಗರ ಎಂಬ ಕುಖ್ಯಾತಿಗೂ ಜಕಾರ್ತಾ ಪಾತ್ರವಾಗಲಿದೆ.
ಮುಂದಿನ ದಿನಗಳಲ್ಲಿ ಇಲ್ಲಿ ಹೆಚ್ಚೆಚ್ಚು ಪ್ರವಾಹಗಳೂ ಆಗಲಿವೆ. ಅಲ್ಲದೆ ಈ ನಗರದ ಮಾಲಿನ್ಯ ಪ್ರಮಾಣವೂ ಹೆಚ್ಚಾಗಿಯೇ ಇದೆ. ಈ ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಈ ಬದಲಾವಣೆ ಮಾಡಲಾಗುತ್ತಿದೆ. ಇಡೀ ಜಕಾರ್ತವೇ ಅಲ್ಲಿಗೆ ಹೋಗುವುದಿಲ್ಲ.
ಆಡಳಿತಾತ್ಮಕ ಕಟ್ಟಡಗಳಷ್ಟೇ ನುಸುಂತರಾಗೆ ವರ್ಗವಾಗಲಿದೆ. ಉಳಿದಂತೆ ವಾಣಿಜ್ಯ ಮತ್ತು ಹಣಕಾಸು ರಾಜಧಾನಿಯಾಗಿ ಜಕಾರ್ತಾ ಉಳಿಯಲಿದೆ. ಕಾಳಿ ಮಂಥನ ಎಂಬ ದೊಡ್ಡ ಕಾಡುಗಳಿರುವ ದ್ವೀಪವೊಂದರಲ್ಲಿ ಹೊಸ ರಾಜಧಾನಿ ನಿರ್ಮಾಣವಾಗಲಿದೆ.
ಇದಕ್ಕೆ ಅಲ್ಲಿನ ಅಧ್ಯಕ್ಷರು ನುಸುಂತಾರಾ ಎಂಬ ಹೆಸರಿಟ್ಟಿದ್ದಾರೆ. ಈ ಪ್ರದೇಶ ಅತ್ಯುತ್ತಮ ನೈಸರ್ಗಿಕ ಸಂಪನ್ಮೂಲವನ್ನೂ ಹೊಂದಿದೆ. ಒಟ್ಟಾರೆ 256,143 ಹೆಕ್ಟರ್ ಪ್ರದೇಶದಲ್ಲಿ ಹೊಸ ನಗರ ನಿರ್ಮಾಣಗೊಳ್ಳಲಿದೆ. ಈ ಪ್ರಮಾಣದ ಅರಣ್ಯವನ್ನು ತೆರವುಗೊಳಿಸಿ ನಗರ ನಿರ್ಮಿಸಲಾಗುತ್ತದೆ.
ಈ ಕಾರ್ಯಕ್ಕೆ ಸರಿ ಸುಮಾರು 32 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗುವ ನಿರೀಕ್ಷೆ ಇದೆ. ಒಟ್ಟಾರೆ ಐದು ಹಂತಗಳಲ್ಲಿ ಈ ರಾಜಧಾನಿಯು ನಿರ್ಮಾಣವಾಗಲಿದ್ದು, 2022ರಲ್ಲೇ ಮೊದಲ ಹಂತ ಶುರುವಾಗಲಿದೆ.