ಪಾನಿಪುರಿ ತಿನ್ನಲು ಸವರ್ಣೀಯರ ಕೇರಿಗೆ ಬಂದ ಪರಿಶಿಷ್ಟ ಜಾತಿಯವರು|ಸಿಟ್ಟಿಗೆದ್ದ ಜನ ಅವರ ಮನೆಗೇ ನುಗ್ಗಿ ಮನಸೋ ಇಚ್ಛೆ ಹಲ್ಲೆ

ಮೈಸೂರು: ಪರಿಶಿಷ್ಟ ಜಾತಿಯವರು ತಮ್ಮ ಕೇರಿಗೆ ಪಾನಿಪುರಿ ತಿನ್ನಲು ಬಂದರೆಂದು ಸಿಟ್ಟಿಗೆದ್ದ ಜನರು ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಸಂಭವಿಸಿದೆ.

ಜ.13ರಂದು ಪಾನಿಪುರಿ ತಿನ್ನಲು ಸವರ್ಣೀಯರ ಕೇರಿಗೆ ಬಂದರು ಎಂಬ ಕಾರಣದಿಂದ ಗ್ರಾಮದ ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಜಯಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಐವರು ಪರಿಶಿಷ್ಟ ಯುವಕರ ವಿರುದ್ಧ ಸವರ್ಣೀಯರು ಪ್ರತಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪರಸ್ಪರರ ವಿರುದ್ಧ ದೂರು ದಾಖಲಾಗಿರುವುದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಲ್ಲೆಗೊಳಗಾದವರು ಮತ್ತು ಘಟನೆಗೆ ಕಾರಣರಾದವರನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆರ್​. ಚೇತನ್​, ಪ್ರತ್ಯೇಕವಾಗಿ ಭೇಟಿ ಮಾಡಿ ಘಟನೆಯ ಮಾಹಿತಿ ಪಡೆದರು. ಎರಡೂ ಸಮುದಾಯದ ಮುಖಂಡರನ್ನು ಕರೆದು ಮಾತನಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ತಾಲೂಕಿನ ಜಯಪುರ ಹೋಬಳಿ ಅರಸಿನಕೆರೆ ಗ್ರಾಮದ ಮೂರ್ತಿ, ಸಚಿನ್​, ನವೀನ್​, ಮಹದೇವಸ್ವಾಮಿ, ಚಂದನ್​ ಮತ್ತು ಸಂತೋಷ್​ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾಗಿರುವ ಸೌಭಾಗ್ಯಾ, ದಿಲೀಪ್​, ಚಂದನ್​, ಮಧುಕರ, ಪ್ರಸನ್ನ ಅವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾಥಮಿಕ ಮಾಹಿತಿ ಆಧರಿಸಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಒತ್ತಡಕ್ಕೆ ಒಳಗಾಗದೆ ನಿಷ್ಪಪಾತವಾಗಿ ತನಿಖೆ ನಡೆಸಲಾಗುವುದು. ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ. ಗ್ರಾಮದಲ್ಲಿ ಬಿಗುವಿನ ವಾತಾವರಣವಿರುವುದರಿಂದ ಮೀಸಲು ಪೊಲೀಸ್​ ಪಡೆ ನಿಯೋಜಿಸಲಾಗಿದೆ. ಎರಡೂ ಸಮುದಾಯದವರು ಪರಸ್ಪರ ಸೌಹಾರ್ದದಿಂದ ಇರಬೇಕು. ಅಹಿತಕರ ಟನೆಗೆ ಅವಕಾಶ ಮಾಡಿಕೊಡಬಾರದು ಎಂದು ಎಸ್​ಪಿ ಸೂಚಿಸಿದ್ದಾರೆ.

Leave A Reply

Your email address will not be published.