30 ದಿನಗಳೊಳಗೆ ಗಂಗಾ ಕಲ್ಯಾಣ ಯೋಜನೆಯ ಅರ್ಜಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸಚಿವ ಸುನೀಲ್ ಕುಮಾರ್ ಸೂಚನೆ
ಉಡುಪಿ : ಠೇವಣಿ ಹಣ ಜಮಾ ಆದ 30 ದಿನದೊಳಗಾಗಿ ಗಂಗಾ ಕಲ್ಯಾಣ ಯೋಜನೆಯ ಅರ್ಜಿಗಳಿಗೆ ವಿದ್ಯುದೀಕರಣ ಸಂಪರ್ಕ ಕಲ್ಪಿಸುವಂತೆ ಕನ್ನಡ-ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಅವರು, ಗಂಗಾ ಕಲ್ಯಾಣ ಯೋಜನೆಯ ಸಂಪರ್ಕ ಹಾಗೂ ವಿದ್ಯುದೀಕರಣದಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಕೂಡದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ಗಂಗಾ ಕಲ್ಯಾಣ ಯೋಜನೆ ಅನ್ವಯ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಾಬು ಜಗಜೀವನ್ ರಾಂ ಅಭಿವೃದ್ಧಿ ನಿಗಮ ಸೇರಿದಂತೆ ಸರಕಾರದ ನಾನಾ ಇಲಾಖೆಗಳಿಂದ ಧನ ಸಹಾಯ ಮಾಡಲಾಗುತ್ತದೆ. ಅರ್ಜಿದಾರರು ಬೋರ್ವೆಲ್ ತೆಗೆಸಿದ ಬಳಿಕ ಸಂಬಂಧಪಟ್ಟ ವಿದ್ಯುತ್ ವಿತರಣಾ ಕಂಪನಿ ವ್ಯಾಪ್ತಿಯಲ್ಲಿ ಈಗಾಗಲೇ ದಾಖಲಿಸಿರುವ ಅರ್ಜಿಯ ಜತೆಗೆ ಸರಕಾರ ನಿಗದಿ ಪಡಿಸಿರುವ 50 ಸಾವಿರ ರೂ. ಠೇವಣಿ ಸಂದಾಯ ಮಾಡಬೇಕಾಗುತ್ತದೆ. ಇದಾದ 30 ದಿನದೊಳಗೆ ವಿದ್ಯುದೀಕರಣ ವ್ಯವಸ್ಥೆ ಕಲ್ಪಿಸಬೇಕೆಂದು ಈಗ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ.