ಬಹುಶಃ ಇದು ಜಗತ್ತಿನ ದೊಡ್ಡ ಆತಿಥ್ಯ, ತಮ್ಮ ಭಾವೀ ಅಳಿಯನಿಗೆ ಅವರು ಮಾಡಿ ಬಡಿಸಿದ್ದು ಬರೊಬ್ಬರಿ 365 ಬಗೆಯ ಥರಾವರಿ ಖಾದ್ಯ ವೈವಿಧ್ಯ !!
ಬಹುಶಃ ಇದು ಜಗತ್ತಿನ ಅತ್ಯಂತ ದೊಡ್ಡ ಬೊಂಬಾಟ್ ಭೋಜನ. ಹೆಣ್ಣಿನ ಕಡೆಯವರು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ತಮ್ಮ ಭಾವಿ ಅಳಿಯನಿಗೆ ಬಗೆ ಬಗೆಯ ಭರ್ಜರಿ ಭೋಜನ ನೀಡಿ ಉಪಚರಿಸಿದ್ದಾರೆ. ಅದು ಹತ್ತಿಪ್ಪತ್ತು ಬಗೆಯ ಅಡುಗೆಯಲ್ಲ. ಅಲ್ಲಿ ತಯಾರಿಸಿ ಬಡಿಸಿದ್ದು ಬರೊಬ್ಬರಿ 365 ಬಗೆಯ ವೈವಿಧ್ಯಮಯ ಆಹಾರವನ್ನು. ಆಂದ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ಕುಟುಂಬವೊಂದು ಈ ರೀತಿ ಭೂರಿ ಭೋಜನ ತಯಾರಿಸಿ ತಮ್ಮ ಭಾವೀ ಅಳಿಯನಿಗೆ ತಮ್ಮ ವಿವಿಧ ರಸಪಾಕಗಳ ಜತೆ ತಮ್ಮ ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಚಿನ್ನದ ವ್ಯಾಪಾರಿ ಆಟಂ ವೆಂಕಟೇಶ್ವರ ರಾವ್ ಮತ್ತು ಮಾಧವಿ ಅವರ ಪುತ್ರಿ ಕುಂದವಿಯೊಂದಿಗೆ ಸಾಯಿಕೃಷ್ಣ ಅವರ ಸಂಬಂಧವನ್ನು ನಿಶ್ಚಯಿಸಲಾಗಿದೆ. ಹಬ್ಬದ ನಂತರ ಇವರಿಬ್ಬರ ಮದುವೆ ನಡೆಯಲಿದೆ. ಈ ಭರ್ಜರಿ ಭೋಜನ ಏರ್ಪಡಿಸಿದ್ದು, ತಮ್ಮಲಪಲ್ಲಿ ಸುಬ್ರಹ್ಮಣ್ಯಂ ಮತ್ತು ಅನ್ನಪೂರ್ಣ ಅವರ ಮಗ ಸಾಯಿಕೃಷ್ಣನಿಗಾಗಿ. ಅದಕ್ಕಾಗಿ ಹೆಣ್ಣುಹೆತ್ತವರು ತಮ್ಮ ಭಾವಿ ಅಳಿಯನಿಗಾಗಿ ಭೀಮ ಭೋಜನವನ್ನು ತಯಾರಿಸಿದ್ದಾರೆ.
ಮದುವೆಗೆ ಮೊದಲು ಹಬ್ಬ ಬಂದಿದ್ದರಿಂದ ವಧುವಿನ ಅಜ್ಜ ಅಚಂತ ಗೋವಿಂದ್ ಹಾಗೂ ಅಜ್ಜಿ ನಾಗಮಣಿ ಮೊಮ್ಮಗಳ ಪತಿಯಾಗುವನಿಗೆ ಈ ಭರ್ಜರಿ ಸತ್ಕಾರ ಮಾಡಿದ್ದಾರೆ.
ಈ ಸತ್ಕಾರ ಒಂದು ರೀತಿಯ ಅದ್ಧೂರಿ ವಿವಾಹ ಪೂರ್ವ ಆರತಕ್ಷತೆಯಂತಾಗಿದೆ. ಈ ಕಾರ್ಯಕ್ರಮದಲ್ಲಿ ವಧು ಮತ್ತು ವರನ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಮಾಂಸದ ಬಿರಿಯಾನಿ, ಪುಳಿಯೋಗರೆ, 30 ವಿವಿಧ ಬಗೆಯ ಥರಾವರಿ ಕರಿದ ತಿಂಡಿಗಳು, ಸಾಂಪ್ರದಾಯಿಕ ಸಿಹಿತಿಂಡಿ, ಬಿಸಿ ಮತ್ತು ತಂಪು ಪಾನೀಯ, ಅನ್ನ, ಬಿಸ್ಕತ್, ಕೇಕ್, ಹಣ್ಣುಗಳು ಹೀಗೆ ಸಾಲು ಸಾಲು ಗಟ್ಟಿ ಆಹಾರ ಪದಾರ್ಥಗಳು ಒಂದರ ಹಿಂದೊಂದು ಬರುತ್ತಲೇ ಇದ್ದವು. ಒಂದು ಒಳ್ಳೆಯ ಊಟ ಮಾಡಲು ಕುಳಿತ ನೆಂಟರಿಷ್ಟರು ಕಕ್ಕಾಬಿಕ್ಕಿ. ಕಾರಣ ಕೊನೆಯಿಲ್ಲದಂತೆ ಕ್ಯೂನಲ್ಲಿ ಆಹಾರಗಳು ಬರುತ್ತಿದ್ದರೆ, ಯಾವುದನ್ನು ತಿನ್ನಲಿ ಯಾವುದನ್ನು ಬಿಡಲಿ ಎಂದು ಕನ್ಫ್ಯೂಷನ್ ಗೆ ಹೋಗಿದ್ದರು ಅಲ್ಲಿಯ ಅತಿಥಿಗಳು.
ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಇಲ್ಲಿರುವವರು ಅತಿಥಿಗಳನ್ನು ಅತ್ಯಂತ ಬದ್ಧತೆಯಿಂದ ನೋಡಿಕೊಳ್ಳುತ್ತಾರೆ ಎಂಬ ಕೀರ್ತಿ ಇದೆ. ಅತಿಥಿ ಸತ್ಕಾರದಲ್ಲಿ ಅವರದು ಯಾವತ್ತೂ ಎತ್ತಿದ ಕೈ. ಈ ಕುಟುಂಬ ಆ ಕೀರ್ತಿಯನ್ನು ಇನ್ನಷ್ಟು ಮೇಲಕ್ಕೆತ್ತಿದೆ. ತನ್ನ ಪ್ರೀತಿಯ ಹುಡುಗಿ ಮದುವೆಗೆ ಮೊದಲೇ ತನಗೆ ಈ ಪಾಟಿ ಬಡಬಡಿಸಿದ್ದನ್ನು ಕಂಡು ಮದುಮಗ ವಿಸ್ಮಿತನಾಗಿದ್ದಾನೆ.