ಜೀವ ಉಳಿಸಿದ ಶಬರಿಮಲೆ ಅಯ್ಯಪ್ಪನಿಗೆ ವಜ್ರದ ಕಿರೀಟ ಕಾಣಿಕೆ ಕೊಟ್ಟ ಭಕ್ತ
ಶಬರಿಮಲೆ ಅಯ್ಯಪ್ಪ ನಿಗೆ ಆಂಧ್ರಪ್ರದೇಶದ ಭಕ್ತರೊಬ್ಬರು ವಜ್ರದ ಕಿರೀಟವನ್ನು ಕಾಣಿಕೆಯಾಗಿ ಕೊಟ್ಟು ಹರಕೆ ತೀರಿಸಿಕೊಂಡಿದ್ದಾರೆ.
ಕರ್ನೂಲ್ ಜಿಲ್ಲೆಯ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರ ಹೊದಿಕೆಯ ಚಿನ್ನದ ಕಿರೀಟ ನೀಡಿದ್ದಾರೆ.
ಕೇರಳ ಹೈಕೋರ್ಟ್ ವಕೀಲರೊಬ್ಬರ ನೆರವಿನೊಂದಿಗೆ ಶುಕ್ರವಾರ ಕಿರೀಟವನ್ನು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಿಗೆ ಹಸ್ತಾಂತರಿಸಿದ್ದಾರೆ. ವೆಂಕಟಸುಬ್ಬಯ್ಯ ಅವರು ಅಯ್ಯಪ್ಪನ ಭಕ್ತರಾಗಿದ್ದಾರೆ.
ಕಳೆದ 30 ವರ್ಷಗಳಿಂದ ಶಬರಿಗಿರಿಗೆ ಭೇಟಿ ನೀಡುತ್ತಿದ್ದಾರೆ. ವೆಂಕಟಸುಬ್ಬಯ್ಯ ಅವರು ಕಳೆದ ವರ್ಷ ಕೊರೊನಾ ಸೋಂಕಿಗೆ ಒಳಗಾಗಿದ್ದರು.
15 ದಿನಗಳ ಐಸಿಯುನಲ್ಲಿ ಚಿಕಿತ್ಸೆ ಪಡೆದು ಸಾವು-ಬದುಕಿನ ನಡುವೆ ಹೋರಾಡಿ ಬದುಕುಳಿದಿದ್ದರು. ಚೇತರಿಸಿಕೊಂಡಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಜ್ರದ ಕಿರೀಟವನ್ನು ನೀಡುವುದಾಗಿ ಹರಕೆ ಹೊತ್ತಿದ್ದರು. ಅದೇ ರೀತಿಯಾಗಿ ಆ ಹರಕೆಯ ಭಾಗವಾಗಿ ಚಿನ್ನದ ಕಿರೀಟವನ್ನು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.