‘ಬಿಜೆಪಿ ಸರ್ಕಾರವು ಮುಸ್ಲಿಮರ ದೊಡ್ಡ ಹಿತೈಷಿ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್, ಎಸ್ಪಿ-ಬಿಎಸ್ಪಿಗೆ ಬಲಿಯಾಗಬೇಡಿ’ -ಸಯ್ಯದ್ ಸಯೀದ್|ಒಂದು ಸಣ್ಣ ತಪ್ಪು ಕೂಡ ನಿಮ್ಮ ತೊಂದರೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ
ನವದೆಹಲಿ:ಚುನಾವಣೆ ನಡೆಯುವ ರಾಜ್ಯಗಳಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ನ ‘ನಿವೇದನ್ ಪತ್ರ’ ವನ್ನು,ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಆರ್ಎಸ್ಎಸ್ ಮುಸ್ಲಿಂ ವಿಭಾಗ ಮನವಿ ಮಾಡಿದ್ದು,ಈ ಸಂದರ್ಭದಲ್ಲಿ ‘ಬಿಜೆಪಿ ಸರ್ಕಾರವು ಮುಸ್ಲಿಮರ ದೊಡ್ಡ ಹಿತೈಷಿ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್, ಎಸ್ಪಿ-ಬಿಎಸ್ಪಿಗೆ ಬಲಿಯಾಗಬೇಡಿ’ ಎಂದು ಆರ್ಎಸ್ಎಸ್ ಮುಸ್ಲಿಂ ವಿಭಾಗದ ರಾಷ್ಟ್ರೀಯ ಸಂಚಾಲಕ ಸಯ್ಯದ್ ಸಯೀದ್ ತಿಳಿಸಿದರು.
ಆರ್ಎಸ್ಎಸ್ ಮುಸ್ಲಿಂ ವಿಭಾಗ ಮುಖ್ಯ ಪೋಷಕ ಇಂದ್ರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿವೇದನ್ ಪತ್ರ ಬಿಡುಗಡೆ ಮಾಡಲಾಯಿತು. ಈ ವೇಳೆ ಸಯ್ಯದ್ ಸಯೀದ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ,ಬಿಜೆಪಿ ಸರ್ಕಾರವು ಮುಸ್ಲಿಮರ ದೊಡ್ಡ ಹಿತೈಷಿ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್, ಎಸ್ಪಿ-ಬಿಎಸ್ಪಿಗೆ ಬಲಿಯಾಗಬೇಡಿ. ಬಿಜೆಪಿಯ ಆಡಳಿತದಲ್ಲಿ ದೇಶದ ಮುಸ್ಲಿಮರು ಅತ್ಯಂತ ಸುರಕ್ಷಿತ ಮತ್ತು ಸಂತೋಷದಿಂದ ಇದ್ದಾರೆ. ಮುಂದೆಯೂ ಹಾಗೆಯೇ ಇರುತ್ತಾರೆ. ನಿಮ್ಮ ಮತಗಳನ್ನು ಬುದ್ಧಿವಂತಿಕೆಯಿಂದ ಚಲಾಯಿಸಿ. ಒಂದು ಸಣ್ಣ ತಪ್ಪು ಕೂಡ ನಿಮ್ಮ ತೊಂದರೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ಕಾಂಗ್ರೆಸ್, ಸಮಾಜವಾದಿ ಪಕ್ಷ(ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಸೇರಿದಂತೆ ವಿರೋಧ ಪಕ್ಷಗಳು ಮುಸ್ಲಿಮರನ್ನು ತಮ್ಮ ಮತಬ್ಯಾಂಕ್ ಎಂದು ಪರಿಗಣಿಸಿವೆ. ಆ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ನಮ್ಮ ಮೇಲೆ ದೌರ್ಜನ್ಯ ಮಾಡಿದೆ. ನಮ್ಮ ಸಮುದಾಯದ ಬಡತನ, ಅನಕ್ಷರತೆ, ಹಿಂದುಳಿದಿರುವಿಕೆ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 2014 ರಿಂದ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ ನೈ ರೋಶ್ನಿ, ನಯಾ ಸವೇರಾ, ನಯೀ ಉಡಾನ್, ಸೀಖೋ ಔರ್ ಕಾಮಾವೋ, ಉಸ್ತಾದ್ ಮತ್ತು ನಾಯ್ ಮಂಜಿಲ್ ಸೇರಿದಂತೆ 36 ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ವಿವರಿಸಿದರು.ಅಲ್ಪಸಂಖ್ಯಾತ ಸಮುದಾಯದವರು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಮುದ್ರಾ ಯೋಜನೆ, ಜನ್ ಧನ್ ಯೋಜನೆ, ಉಜ್ವಲ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸ್ಟಾರ್ಟ್ಆಪ್ ಇಂಡಿಯಾ ಮತ್ತು ಮೋದಿ ಸರ್ಕಾರ ಪ್ರಾರಂಭಿಸಿದ ಇತರ ಯೋಜನೆಗಳಿಂದ ಪ್ರಯೋಜನವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ದೇಶದಿಂದ ಹೊರಹಾಕಲಾಗುವುದು ಎಂದು ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ ಸೇರಿದಂತೆ ವಿರೋಧ ಪಕ್ಷಗಳು ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಬಹಳ ಹಿಂದಿನಿಂದಲೂ ಅಪಪ್ರಚಾರ ನಡೆಸುತ್ತಿವೆ. ಈ ಏಳು ವರ್ಷಗಳಿಂದ ಎಷ್ಟು ಮುಸ್ಲಿಮರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ವಿರೋಧ ಪಕ್ಷಗಳಿಗೆ ಪ್ರಶ್ನಿಸಿದರು.ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮುಸ್ಲಿಮರನ್ನು ಕೇವಲ ತಮ್ಮ ಮತಬ್ಯಾಂಕ್ ಎಂದು ಪರಿಗಣಿಸಿವೆ. 2014 ರಿಂದ ಮುಸ್ಲಿಮರ ಮೇಲೆ ‘ಕೋಮು ಗಲಭೆಗಳು ಮತ್ತು ದೌರ್ಜನ್ಯಗಳ’ ಘಟನೆಗಳು ತೀವ್ರವಾಗಿ ಕಡಿಮೆಯಾಗಿದೆ ಎಂದು ಹೇಳಿದರು.