ಬಿಸಿಲಲ್ಲೇ ಒಣಗಿಕೊಂಡು ಪಾಠ ಕೇಳುತ್ತಿದ್ದಾರೆ ಮಣಿಕ್ಕರ ಶಾಲಾ ವಿದ್ಯಾರ್ಥಿಗಳು | ಬಿರುಕು ಬಿಟ್ಟಿದೆ ಶಾಲಾ ಗೋಡೆ ,ಬಿಸಿಲಲ್ಲೇ ಮಕ್ಕಳಿಗೆ ಪಾಠ

ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಉರಿಬಿಸಿಲಿನಲ್ಲಿ ಒಣಗಿಕೊಂಡು ಪಾಠ ಕೇಳ ಬೇಕಾದ ದಯನೀಯ ಸ್ಥಿತಿಯಲ್ಲಿದ್ದಾರೆ.

ಈ ಶಾಲೆ ಗ್ರಾಮೀಣ ಭಾಗದಲ್ಲಿದ್ದು , ಈ ಶಾಲೆಯಲ್ಲಿ 88ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಬಡ ಕೂಲಿ ಕಾರ್ಮಿಕರ ಮಕ್ಕಳು. ಈ ಶಾಲೆಯಲ್ಲಿ ಸದ್ಯಕ್ಕೆ ಶಿಕ್ಷಕರ ಕೊರತೆಯಿಲ್ಲ. ಮಕ್ಕಳು ಪಾಠ ಕೇಳಲು ಕುಳಿತುಕೊಳ್ಳುವ ತರಗತಿ ಕೋಣೆಗಳು ಬಿರುಕು ಬಿಟ್ಟಿದೆ.

ಸ್ವಲ್ಪ ಹೆಚ್ಚು ಕಮ್ಮಿಯಾದರೂ ಮಾಡು ಗೋಡೆ ಬಿದ್ದರೂ ಅಚ್ಚರಿಯಿಲ್ಲ. ಶಾಲೆಯಲ್ಲಿರುವ ನಲಿ-ಕಲಿ ಕೊಠಡಿ ಹೊರತುಪಡಿಸಿ ಉಳಿದ ಎಲ್ಲಾ ತರಗತಿಗಳದ್ದು ಇದೇ ಅವಸ್ಥೆ.
ಇದೀಗ ಈ ಮಕ್ಕಳು ತರಗತಿ ಕೋಣೆಯ ಗೋಡೆ ಬೀಳುವ ಸ್ಥಿತಿಯಲ್ಲಿರುವುದರಿಂದ 1ರಿಂದ 7 ನೇ ತರಗತಿಯ ಮಕ್ಕಳು ಈಗ ಶಾಲಾ ರಂಗ ಮಂಟಪದಲ್ಲಿ ಬಿಸಿಲಿನ ಹೊಡೆತದೊಂದಿಗೆ ಪಾಠ ಕೇಳುವ ಸ್ಥಿತಿಯಲ್ಲಿದ್ದಾರೆ.
ಮನವಿ ನೀಡಿದರೂ ಸ್ಪಂದನೆಯೇ ಇಲ್ಲ
ಈ ಶಾಲೆಯ ಅವಸ್ಥೆಯ ಬಗ್ಗೆ ಶಿಕ್ಷಣ ಇಲಾಖೆಗೂ, ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಶಾಲೆ ಅಪಾಯದಲ್ಲಿದೆ. ದುರಸ್ತಿ ಮಾಡಿ ಅಥವಾ ಹೊಸ ಕಟ್ಟಡ ನಿರ್ಮಿಸಿ ಎಂದು ಪೋಷಕರು, ಶಿಕ್ಷಕರು, ಎಸ್ಡಿಎಂಸಿಯವರು ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ ಮನವಿಯನ್ನೂ ಕೊಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಶಾಲೆ ಅಪಾಯದ ಎಚ್ಚರಿಕೆ ಕೊಡುತ್ತಲೇ ಇದೆ. ಪೋಷಕರು ನಿತ್ಯವೂ ಆತಂಕ, ದುಗುಡ, ದುಮ್ಮಾನಗಳ ನಡುವೆಯೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ನಮ್ಮ ಮಕ್ಕಳ ಜೀವಕ್ಕೆ ಬೆಲೆಯಿಲ್ಲದೇ ಎಂದು ಪ್ರಶ್ನಿಸುತ್ತಿರುವ ಪೋಷಕರು
ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು ಇಲ್ಲದಿದ್ದಲ್ಲಿ ವರ್ಗಾವಣೆ ಪತ್ರ ನೀಡುವಂತೆ ಒತ್ತಾಯಿಸಿದ್ದಾರೆ.
ಒಂದು ತರಗತಿ ಕೋಣೆ ಬಂದ್..!
ಈಗಾಗಲೇ ಅಪಾಯದ ಮುನ್ಸೂಚನೆಯ ಕಾರಣಕ್ಕೆ ಶಾಲೆಯ ಎಲ್ಲಾ ತರಗತಿ ಕೋಣೆಯನ್ನು ಬಂದ್ ಮಾಡಲಾಗಿದೆ. ನಲಿಕಲಿ ಕೊಠಡಿ ಹಾಗೂ ರಂಗ ಮಂದಿರದಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ.
ಹಳೆಯ ಕಟ್ಟಡ ಏಲಂ
ಶಾಲೆಯ ಹಳೆಯ ಒಂದು ಕಟ್ಟಡವನ್ನು ಏಲಂ ಮಾಡಲಾಗಿದ್ದು,ಅದೂ ತೆರವಾಗದೇ ಹಾಗೇ ಉಳಿದುಕೊಂಡಿದೆ.
ಶಾಲೆಯ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಅಥವಾ ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು ಎನ್ನುವುದು ಪೋಷಕರ ಆಗ್ರಹ.
ಈ ಶಾಲೆಗೆ ದಾನಿಗಳ ನೆರವಿನಿಂದ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ.ಪೋಷಕರು,ಶಾಲಾಭಿವೃದ್ದಿ ಸಮಿತಿಯವರು ಸೇರಿಕೊಂಡು ಅಡಿಕೆ ತೋಟ,ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸಿದ್ದಾರೆ.ಇಷ್ಟೆಲ್ಲಾ ವ್ಯವಸ್ಥೆ ಮಾಡಿರುವ ಈ ಶಾಲೆಯ ಕೊಠಡಿ ಮಾತ್ರ ಬೀಳುವ ಹಂತಕ್ಕೆ ತಲುಪಿರುವುದು ವಿಪರ್ಯಾಸವೇ ಸರಿ
- ಇಬ್ರಾಹಿಂ ಅಂಬಟೆಗದ್ದೆ,ಮೋನಪ್ಪ ಸದಸ್ಯರು ಎಸ್.ಡಿ.ಎಂ.ಸಿ.
ಮಣಿಕ್ಕರ ಶಾಲೆಯ ಪೋಷಕರ ಅಳಲನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಪುರಸ್ಕರಿಸದೇ ಇದ್ದಲ್ಲಿ ಶಾಲೆಯಲ್ಲಿ ಅಪಾಯ ಉಂಟಾಗುವುದು ನಿಶ್ಚಿತ. ಈಗಾಗಲೇ ಜನಪ್ರತಿನಿಧಿಗಳಿಗೆ ,ಅಧಿಕಾರಿಗಳಿಗೆ ಮನವಿ ನೀಡಲಾಗಿದೆ.ಆದರೂ ಯಾವುದೇ ಪ್ರಯೋಜನವಾಗಿಲ್ಲ.
-ರಹಿಮಾನ್ ,ಅಧ್ಯಕ್ಷರು ಶಾಲಾಭಿವೃದ್ದಿ ಸಮಿತಿ
ಮಕ್ಕಳನ್ನು ಕಳುಹಿಸಲು ವೇದನೆಯಾಗುತ್ತದೆ
ಮನೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ವೇದನೆಯಾಗುತ್ತಿದೆ.ಪ್ರತಿನಿತ್ಯ ಮಕ್ಕಳು ಬಿಸಿಲಿನಲ್ಲಿ ಒಣಗಬೇಕಾದ ಪರಿಸ್ಥಿತಿ ಇದೆ.ಮಕ್ಕಳ ಸ್ಥಿತಿ ಕಣ್ಣೀರು ತರಿಸುತ್ತದೆ.
-ರಶ್ಮಿ ,ಪೋಷಕರು