ರಾಜ್ಯದಲ್ಲಿ ಶಾಲೆಗಳ ಬಂದ್ ಇಲ್ಲ. ಬೆಂಗಳೂರಿನಲ್ಲಿ ಮಾತ್ರ ಜ.31ರವರೆಗೆ ಬಂದ್ ಮುಂದುವರಿಯಲಿದ್ದು, ಸೋಂಕಿನ ಪ್ರಕರಣಗಳು ಹೆಚ್ಚಿರುವ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಕೋವಿಡ್ ವೇಳೆ ಶಾಲೆಗಳ ಪರಿಸ್ಥಿತಿ ಅವಲೋಕಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬುಧವಾರ ಜಿಲ್ಲಾಧಿಕಾರಿಗಳ ಜತೆಗೆ ವಿಡಿಯೋ ಸಂವಾದ ನಡೆಸಿದರು.
ರಾಜ್ಯದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿದ್ದರೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತೀರ ಕಡಿಮೆ ಇದೆ. 1 ಮತ್ತು 2ನೇ ಅಲೆಯಂತೆ ಆತಂಕಪಡುವ ಅಗತ್ಯವಿಲ್ಲ. ತೀವ್ರತೆ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಅಪಾಯ ಕಡಿಮೆಯಾಗಿ ಎಂದು ತಜ್ಞರು ತಿಳಿಸಿದ್ದಾರೆ.
ಅದರಲ್ಲೂ ಮಕ್ಕಳಲ್ಲಿ ಸೋಂಕು ಬಾಧಿಸುವ ಪ್ರಮಾಣ ಸಹ ಕಡಿಮೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸುವ ಅಗತ್ಯತೆ ಕಂಡುಬಂದಿಲ್ಲ.
ಪಾಸಿಟಿವಿಟಿ ದರ ಶೇ.5 ಬಂದ ಮಾತ್ರ ಆಯಾ ತಾಲೂಕಿನಲ್ಲಿರುವ ಶಾಲೆಗಳಿಗೆ ರಜೆ ನೀಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಎರಡು ಅಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಶಿಕ್ಷಣ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಬಂದ್ ಮಾಡದಿರಲು ನಿರ್ಧಾರ ಮಾಡಲಾಗಿದೆ. ಬಂದ್ ಆಗುವ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಗಮ, ಚಂದನ ವಾಹಿನಿ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ನಾಗೇಶ್ ಹೇಳಿದರು.
ರಾಜ್ಯದ ಯಾವುದೇ ಭಾಗದಲ್ಲಿ ಮಗು ಕರೊನಾ ಸೋಂಕಿಗೆ ಒಳಗಾದಲ್ಲಿ, ಆ ಮಾಹಿತಿಯನ್ನು ತಕ್ಷಣ ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದು ಸೂಚಿಸಿದರು.
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತ ಆರ್.ವಿಶಾಲ್, ಪಿಯು ಇಲಾಖೆ ನಿರ್ದೇಶಕಿ ಆರ್.ಸ್ನೇಹಲ್ ಇತರರು ಇದ್ದರು.
You must log in to post a comment.