ಕೊರೊನಾ ವ್ಯಾಕ್ಸಿನ್ ಪಡೆದ ಬಳಿಕ 5 ವರ್ಷಗಳ ಹಿಂದೆ ನಿಂತು ಹೋಗಿದ್ದ ಮಾತು ಮರಳಿ ಪಡೆದ ಮೂಕ ವ್ಯಕ್ತಿ
ಜಾರ್ಖಂಡ್: ಕೋವಿಡ್ ವ್ಯಾಕ್ಸಿನ್ ಪಡೆದ ನಂತರ ವ್ಯಕ್ತಿಯೋರ್ವನಿಗೆ ಕಳೆದ ಐದು ವರ್ಷಗಳ ನಂತರ ನಿಂತು ಹೋಗಿದ್ದ ಮಾತು ಪುನಃ ಬಂದಿದೆ ಎನ್ನುವ ಸುದ್ದಿ ವರದಿಯಾಗಿದೆ.
ಜಾರ್ಖಂಡ್ ರಾಜ್ಯದ ಬೊಕಾರೊದಲ್ಲಿ ವ್ಯಕ್ತಿಯೋರ್ವ ಕೋವಿಡ್ ಲಸಿಕೆ ಕೋವಿಶೀಲ್ಡ್ ಪಡೆದುಕೊಂಡಿದ್ದ. ಹಾಗೆ ಪಡೆದ ವಾರದ ನಂತರ ವ್ಯಕ್ತಿಯೋರ್ವನ ದೇಹದಲ್ಲಿ ಹೊಸ ರೀತಿಯ ಬದಲಾವಣೆ ಕಾಣಿಸಿಕೊಂಡಿದೆ. ಕಳೆದ ಐದು ವರ್ಷಗಳ ನಂತರ ಆತನಿಗೆ ಮಾತು ಮರಳಿ ಬಂದಿದೆ. ಅಷ್ಟೇ ಅಲ್ಲ, ಆತನ ದೇಹದ ಕೆಲವೊಂದು ಕ್ರಿಯಾಶೀಲ ವಲ್ಲದ ಕೆಲವು ಮೂಳೆಗಳು ಕೂಡ ಕೆಲಸ ಮಾಡಲು ಶುರು ಮಾಡಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಲಿನ ಸಲ್ಗಡಿ ಗ್ರಾಮದ ನಿವಾಸಿಯಾಗಿರವ ದುಲರ್ ಚಂದ್ ಮುಂಡಾ ಎಂಬ 55 ವರ್ಷದ ವ್ಯಕ್ತಿಗೆ ಐದು ವರ್ಷಗಳ ಹಿಂದೆ ರಸ್ತೆ ಅಪಘಾತ ಆಗಿತ್ತು. ಆಗ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆಯ ನಂತರ ಗುಣಮುಖರಾಗಿದ್ದರೂ ದೈಹಿಕ ನ್ಯೂನತೆಗಳಿಂದಾಗಿ ಹಾಸಿಗೆ ಹಿಡಿದಿದ್ದರು. ದಿನದಿಂದ ದಿನಕ್ಕೆ ಅವರ ಧ್ವನಿಯೂ ಕ್ಷೀಣಿಸಿ ಮಾತು ಕೂಡ ತೊದಲುತ್ತಿತ್ತು.
ಇತ್ತೀಚೆಗೆ ಜನವರಿ 4 ರಂದು, ಇವರಿಗೆ ಕೋವಿಡ್ ಮೊದಲ ಡೋಸ್ ಆಗಿ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ.
ಇದಾದ ಬಳಿಕ ಆತನ ದೇಹದಲ್ಲಿ ಹಲವು ರೀತಿಯ ಬದಲಾವಣೆ ಕಾಣಿಸಿಕೊಂಡಿದ್ದು, ಕ್ರಮೇಣ ಕೆಲವೇ ದಿನಗಳಲ್ಲೇ ಆತ ಸ್ಪಷ್ಟವಾಗಿ ಮಾತನಾಡುವುದರ ಜೊತೆಗೆ ಆತನ ದೇಹದ ಕೆಲವೊಂದು ನಿಷ್ಕ್ರಿಯ ಮೂಳೆಗಳು ಕೆಲಸ ಮಾಡಲು ಪ್ರಾರಂಭ ಆಗಿದೆಯಂತೆ. ಈ ಬಗ್ಗೆ ಮಾತನಾಡಿರುವ ಅಲ್ಲಿನ ವೈದ್ಯಾಧಿಕಾರಿ ಡಾ. ಅಲ್ಬೆಲ್ ಕೆರ್ಕೆಟ್, ಇದೊಂದು ಸಂಶೋಧನೆಯ ವಿಷಯವಾಗಬಹುದು ಅನ್ನಿಸುತ್ತದೆ. ನಿಜಕ್ಕೂ ಅವರ ದೇಹದಲ್ಲಿ ಇಷ್ಟೊಂದು ಬದಲಾವಣೆ ಕಂಡು ಬಂದಿರುವುದು ವೈದ್ಯಕೀಯ ಅಚ್ಚರಿ ಎಂದಿದ್ದಾರೆ, ಆ ಡಾಕ್ಟರ್.