ಇನ್ನೂ ಮುಗಿಯದ ಕೇಸರಿ ಶಲ್ಯ- ಸ್ಕಾರ್ಫ್ ವಿವಾದ | ಕಾಲೇಜು ಆವರಣದಲ್ಲೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ವಿದ್ಯಾರ್ಥಿಗಳು
ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಶುರುವಾದ ಸ್ಕಾರ್ಫ್ ವಿವಾದ ಚಿಕ್ಕಮಗಳೂರು ಜಿಲ್ಲೆಗೆ ತಲುಪಿತ್ತು. ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಭವವಾಗಿದ್ದ ಕೇಸರಿ ಶಲ್ಯ-ಸ್ಕಾರ್ಫ್ ವಿವಾದ ತಣ್ಣಗಾಗುತ್ತಿದ್ದಂತೆಯೇ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಅದೇ ಸಮಸ್ಯೆ ಇದೀಗ ಮೊಳಕೆಯೊಡೆದಿದೆ.
ಹೌದು, ಪದವಿ ಪೂರ್ವ ಕಾಲೇಜಿನಲ್ಲಿ ಕೇಸರಿ ಶಲ್ಯ ಹಾಗೂ ಸ್ಕಾರ್ಫ್ ವಿವಾದಕ್ಕೆ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದೆ. ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಲ್ಲಿ ಕೆಲ ವಿದ್ಯಾರ್ಥಿಗಳೂ ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅನ್ಯ ಕೋಮಿನ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿಕೊಂಡು ಕಾಲೇಜಿಗೆ ಬರುವುದನ್ನು ವಿರೋಧಿಸಿದ್ದರು. ಇದರ ಪರಿಣಾಮ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿಕೊಂಡು ಬಂದು ಪ್ರತಿಭಟನೆ ನಡೆಸಿದ್ದರು. ಸ್ಕಾರ್ಫ್ ಧರಿಸುವುದರಿಂದ ಸಮವಸ್ತ್ರದ ಮೂಲ ಉದ್ದೇಶ ಉಲ್ಲಂಘನೆಯಾಗುತ್ತಿದೆ ಎಂದು ಪಿಯುಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.
ಈಗ ಅದೇ ಸ್ಕಾರ್ಫ್-ಕೇಸರಿ ಶಲ್ಯ ವಿಚಾರಕ್ಕೆ ಎರಡು ಗುಂಪುಗಳ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದಾರೆ. ಕಾಲೇಜಿನ ಆವರಣದಲ್ಲಿಯೇ ಹೊಡೆದಾಡಿಕೊಂಡಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪದವಿ ಕಾಲೇಜಿನಲ್ಲಿ ಉದ್ಭವವಾಗಿದ್ದ ಸಮಸ್ಯೆ ತಣ್ಣಗಾಗುತ್ತಿದ್ದಂತೆಯೇ, ಈಗ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ಹಂತ ಮುಂದಕ್ಕೆ ಹೋಗಿ ಹೊಡೆದಾಡುವ ಮಟ್ಟ ತಲುಪಿದೆ.
ಈ ವಿವಾದದ ಆರಂಭದಲ್ಲಿಯೇ ಇತ್ಯರ್ಥಗೊಳಿಸುವಲ್ಲಿ ಕಾಲೇಜು ಆಡಳಿತ ಮಂಡಳಿ ಮುಂದಾಗಬೇಕಿತ್ತು. ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ಬೇಜವಾಬ್ದಾರಿಯಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ ಎಂದು ಸ್ಥಳಿಯರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪದವಿ ಕಾಲೇಜಿನಲ್ಲಿ ಉದ್ಭವವಾಗಿದ್ದ ಇದೇ ಸಮಸ್ಯೆಗೆ ಕಾಲೇಜಿನ ಪ್ರಾಂಶುಪಾಲರು ಪೋಷಕರ ಸಭೆ ಕರೆದು ಸಮಸ್ಯೆಗೆ ತಿಲಾಂಜಲಿ ಇಟ್ಟಿದ್ದರು. ಈಗ ಪದವಿ ಪೂರ್ವ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ ಜೋರಾಗಿದೆ.