ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಬಳಸಿಕೊಂಡು 26 ಮಹಿಳೆಯರನ್ನು ವಂಚಿಸಿದ್ದ ಭೂಪ ಕೊನೆಗೂ ಪೊಲೀಸ್ ಅತಿಥಿ !! | 27ನೇ ಮಹಿಳೆ ಪೊಲೀಸ್ ಇಲಾಖೆಯ ಮಹಿಳೆಯಾದ ಕಾರಣ ಆರೋಪಿ ಬಲೆಗೆ
ವಿವಾಹವಾಗುವುದಾಗಿ ನಂಬಿಸಿ 26 ಮಹಿಳೆಯರನ್ನು ವಂಚಿಸಿದ್ದ ವ್ಯಕ್ತಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಂಚನೆಗಾಗಿ ಮ್ಯಾಟ್ರಿಮೊನಿಯಲ್ ವೆಬ್ ಸೈಟ್ ಗಳನ್ನು ಬಳಕೆಮಾಡಿಕೊಳ್ಳುತ್ತಿದ್ದ ವ್ಯಕ್ತಿ ಪೊಲೀಸ್ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯನ್ನೂ ವಂಚಿಸಲು ಯತ್ನಿಸಿ ಈಗ ಬಂಧನಕ್ಕೊಳಗಾಗಿದ್ದಾನೆ.
ಆರೋಪಿಯನ್ನು ವಿಜಯಪುರದ ನಿವಾಸಿ ಜೈ ಭೀಮ್ ವಿಠಲ್ ಪಡುಕೋಟಿ (33) ಎಂದು ಗುರುತಿಸಲಾಗಿದ್ದು, ಪೊಲೀಸರು ಈತನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದು, ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗೆ ಆತನ ತಂದೆಯ ನಿಧನದ ಬಳಿಕ ಹೆಸ್ಕಾಮ್ ನಲ್ಲಿ ಲೈನ್ ಮೆನ್ ಆಗಿ ನೌಕರಿ ದೊರೆತಿತ್ತು. 2013 ರಲ್ಲಿ ಈತನಿಗೆ ಕವಿತ ಎಂಬ ಯುವತಿ ಜೊತೆ ವಿವಾಹವಾಗಿತ್ತು. ಆದರೆ ಆಕೆಯನ್ನು ಈತ ಹತ್ಯೆ ಮಾಡಿದ್ದ. ಆರೋಪ ಸಾಬೀತಾಗಿ 2 ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ.
ಬೇಲ್ ಪಡೆದು ಕಾರಾಗೃಹದಿಂದ ಹೊರ ಬಂದಿದ್ದ ಈ ವ್ಯಕ್ತಿ, ಐಷಾರಾಮಿ ಜೀವನ ನಡೆಸಲು ಮಹಿಳೆಯರನ್ನು ವಿವಾಹದ ನೆಪದಲ್ಲಿ ವಂಚಿಸಲು ತೊಡಗಿಕೊಂಡಿದ್ದ. ಆರೋಪಿ ಮ್ಯಾಟ್ರಿಮೊನಿಯಲ್ ಸೈಟ್ ಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಹೆಸ್ಕಾಮ್ ನಲ್ಲಿ ಸೆಕ್ಷನ್ ಆಫೀಸರ್ ಎಂದು ಹೇಳಿಕೊಳ್ಳುತ್ತಿದ್ದ.
ಮ್ಯಾಟ್ರಿಮೊನಿಯಲ್ ಸೈಟ್ ಗಳಲ್ಲಿ ಮಹಿಳೆಯರಿಗೆ ನಿಮ್ಮ ಪ್ರೊಫೈಲ್ ನ್ನು ಇಷ್ಟಪಟ್ಟಿದ್ದೇನೆ ಎಂದು ಹೇಳಿ ಮಹಿಳೆಯರ ಪೋಷಕರು, ಸಂಬಂಧಿಕರ ನಂಬಿಕೆ ಗಿಟ್ಟಿಸಲು ಅವರ ಮನೆಗೆ ಭೇಟಿ ನೀಡುತ್ತಿದ್ದ. ಯುವತಿಯ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳನ್ನು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದ.
ಆರೋಪಿ ತನ್ನನ್ನು ವಿವಾಹವಾಗುವುದಕ್ಕೆ ಒಪ್ಪಿಕೊಳ್ಳುತ್ತಿದ್ದ ಮಹಿಳೆಯರ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯುತ್ತಿದ್ದ. ಹಣವನ್ನು ವಾಪಸ್ ಕೇಳಿದಾಗ ಅವರಿಗೆ ಬೆದರಿಕೆ ಹಾಕುತ್ತಿದ್ದ. ಇಷ್ಟೇ ಅಲ್ಲದೇ ವಿವಾಹವಾಗುವುದಾಗಿ ನಂಬಿಸಿ ಮೂವರು ಮಹಿಳೆಯರೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ಮಹಿಳೆಯರಿಗೆ ಈ ರೀತಿ ವಂಚಿಸುತ್ತಿದ್ದ ಈತನ ವಿರುದ್ಧ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ.