ಉಡುಪಿ : ವಿಶೇಷ ಪೂಜೆ ಸಂದರ್ಭ ಅಯ್ಯಪ್ಪ ಮಾಲಾಧಾರಿಗೆ ಮೈಯಲ್ಲಿ ಆವೇಶ, ಗುರುಸ್ವಾಮಿಯಿಂದ ತೀರ್ಥ ಹಾಗೂ ಭಸ್ಮ ಸಂಪ್ರೋಕ್ಷಣೆ
ಉಡುಪಿಯಲ್ಲಿ ಕಟ್ಟುನಿಟ್ಟಿನ ವ್ರತಾಚರಣೆಯನ್ನು ಮಾಡಿ ಶಬರಿಮಲೆಗೆ ಹೊರಟ ಅಯ್ಯಪ್ಪ ಮಾಲಾಧಾರಿಯೊಬ್ಬರಿಗೆ ಮಣಿಕಂಠನಿಗೆ ವಿಶೇಷ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಮೈಮೇಲೆ ಆವೇಶ ಬಂದಿರುವ ಘಟನೆ ನಡೆದಿದ್ದು, ಗುರುಸ್ವಾಮಿಗಳು ತೀರ್ಥ ಮತ್ತು ಭಸ್ಮ ಸಂಪ್ರೋಕ್ಷಣೆ ಮಾಡಿಸಿದ್ದಾರೆ.
ಉಡುಪಿಯ ಕಸ್ತೂರ್ಬಾ ನಗರದಲ್ಲಿ ಮಣಿಕಂಠನಿಗೆ ಪೂಜೆ ನಡೆಯುತ್ತಿತ್ತು. ಆ ವೇಳೆಗೆ ಅಯ್ಯಪ್ಪ ಸ್ವಾಮಿಯ ಭಜನೆ ಮಾಡುತ್ತಿದ್ದ ಮಾಲಾಧಾರಿಯೊಬ್ಬರು ಆವೇಶಭರಿತರಾಗಿದ್ದಾರೆ. ಭಕ್ತರ ಗುಂಪಿನಲ್ಲಿದ್ದ ಮಾಲಾಧಾರಿಗೆ ಕೆಲಕಾಲ ಮೈಮೇಲೆ ಆವೇಶ ಬಂದಿದ್ದು, ಗುರುಸ್ವಾಮಿಗಳು ತೀರ್ಥ ಪ್ರೋಕ್ಷಣೆ ಮಾಡಿಸಿದ ನಂತರ ಸಹಜ ಸ್ಥಿತಿಗೆ ಬಂದಿದ್ದಾರೆ.
ಮುಂಬೈಯ ಶ್ರೀ ಧರ್ಮಸ್ಥಳ ಅಯ್ಯಪ್ಪ ಭಕ್ತವೃಂದ ಕೊರೊನಾ ಸಂಕಟದ ನಡುವೆ ಶಬರಿಮಲೆ ಯಾತ್ರೆ ಮಾಡುತ್ತಿದೆ. ಈ ಶಿಬಿರದಲ್ಲಿ 67 ಮಾಲಾಧಾರಿಗಳಿದ್ದು, ಕಳೆದ 40 ವರ್ಷದಿಂದ ಯಾತ್ರೆ ಮಾಡುತ್ತಿದ್ದಾರೆ. ತಂಡದಲ್ಲಿ ಕರ್ನಾಟಕದ ಕರಾವಳಿ ಪ್ರದೇಶದವರು ಮತ್ತು ಮಹಾರಾಷ್ಟ್ರದವರು ಇದ್ದಾರೆ.
ಹೋಟೆಲ್, ಬ್ಯಾಂಕ್ ಸೇರಿದಂತೆ ಬೇರೆ ಬೇರೆ ಉದ್ಯಮ ಮಾಡುವ ಗೆಳೆಯರ ತಂಡ ಪ್ರತಿವರ್ಷ ಯಾತ್ರೆಯನ್ನು ಮಾಡುತ್ತಿದ್ದಾರೆ. ಮುಂಬೈನಿಂದ ರೈಲು ಮೂಲಕ ಬಂದ ಅಯ್ಯಪ್ಪ ಮಾಲಾಧಾರಿಗಳು, ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಮಾಡಿ ಉಡುಪಿಯ ಕಸ್ತೂರ್ಬಾ ನಗರದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದರು.
ಪೂಜೆಯ ಸಂದರ್ಭ ಸ್ಥಳೀಯರು ವೃತಾಚರಣೆಯನ್ನು ಕೈಗೊಂಡು ಮುಂಬೈನ ತಂಡದ ಜೊತೆ ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಗುರುಸ್ವಾಮಿಗಳಿಂದ ವಿಶೇಷ ಪೂಜೆ ಹಾಗೂ ಆರತಿ ಸೇವೆ ನಡೆಯಿತು.
ಕೊರೋನಾ ಮಾರ್ಗಸೂಚಿ ಇರುವುದರಿಂದ ಶಬರಿಮಲೆಯಲ್ಲಿ ಪ್ರತಿದಿನ ಸುಮಾರು 30 ಸಾವಿರ ಭಕ್ತರಿಗೆ ಮಾತ್ರ ದೇವರ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಮಕರ ಸಂಕ್ರಾಂತಿ ಜ್ಯೋತಿಯ ಸಂದರ್ಭ ಸರ್ಕಾರ ಯಾವೆಲ್ಲ ನಿಯಮಗಳನ್ನು ರೂಪಿಸುತ್ತದೆ ಎಂಬ ಬಗ್ಗೆ ಅಯ್ಯಪ್ಪ ಭಕ್ತರಲ್ಲಿ ಕುತೂಹಲ ಇದೆ.