ಜಾಲಿ ಮೂಡ್ ನಲ್ಲಿ ಬೋಟಿಂಗ್ ಮಾಡುತ್ತಿದ್ದ ಪ್ರವಾಸಿಗರ ಮೇಲೆಯೇ ಕುಸಿದ ದೈತ್ಯಾಕಾರದ ಬಂಡೆ : ಮೃತ್ಯುಕೂಪವಾದ ಫರ್ನಾಸ್ ಸರೋವರ, 10 ಮಂದಿ ದುರ್ಮರಣ, 20 ಮಂದಿ ನಾಪತ್ತೆ
ಬ್ರೆಜಿಲ್ : ಮಿನಾಸ್ ಗೆರೈಸ್ ರಾಜ್ಯದ ಫರ್ನಾಸ್ ಸರೋವರದಲ್ಲಿ ಬೋಟಿಂಗ್ ಮಾಡುತ್ತಿದ್ದ ಬೋಟ್ ಗಳ ಮೇಲೆ ದೈತ್ಯಾಕಾರದ ಬೃಹತ್ ಬಂಡೆಯೊಂದು ಉರುಳಿದ್ದು, 3 ಬೋಟ್ ಕೆಳಗೆ ಇದ್ದ 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಮೂರು ದೋಣಿಗಳು ಸಿಲುಕಿಕೊಂಡಿದ್ದರಿಂದ 10 ಮಂದಿ ಸಾವಿಗೀಡಾಗಿ 32 ಮಂದಿ ಗಾಯಗೊಂಡಿದ್ದಾರೆ. ಇಷ್ಟೂ ಅಲ್ಲದೆ 20 ಮಂದಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಕಲ್ಲಿನ ಬಂಡೆ ಬೀಳುತ್ತಿರುವ ದೃಶ್ಯವನ್ನು ಕಂಡು ಕೆಲವರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.
ಟೂರಿಸ್ಟ್ ಸ್ಥಳವಾಗಿರುವ ಫರ್ನಾಸ್ ಸರೋವರದಲ್ಲಿ ಶನಿವಾರ ಮಧ್ಯಾಹ್ನ 12.30 ರ ಹೊತ್ತಿಗೆ ಈ ಘಟನೆ ನಡೆದಿದೆ. ಫರ್ನಾಸ್ ಸರೋವರದಲ್ಲಿ ಹಲವು ಪ್ರವಾಸಿಗರ ಬೋಟ್ ಗಳು ಇದ್ದವು. ಈ ಹೊತ್ತಲ್ಲಿ ಅಲ್ಲಿದ್ದ ದೊಡ್ಡ ಕಲ್ಲು ಗುಡ್ಡದ ಒಂದು ಭಾಗ ಒಡೆದು ಮೂರು ಬೋಟ್ ಗಳ ಮೇಲೆ ಬಿದ್ದಿದೆ. ಶನಿವಾರ ವೀಕೆಂಡ್ ಆಗಿದ್ದರಿಂದ ಸಹಜವಾಗಿಯೇ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಹಾಗೆಯೇ ನಿನ್ನೆ ಕೂಡಾ ತುಂಬಾ ಜನ ಪ್ರವಾಸಿಗರು ಇದ್ದರು. ಅಪಾಯದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯ ನಡೆದಿದೆ.
ಇನ್ನು ಬ್ರೆಜಿಲ್ ನ ಪ್ರಖ್ಯಾತ ಸರೋವರ ಸಾವೊ ಪಾಲೊದಿಂದ ಉತ್ತರಕ್ಕೆ ಸುಮಾರು 260 ಮೈಲುಗಳಷ್ಟು ದೂರವಿದೆ. ಅಪಾಯದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಬ್ರೆಜಿಲ್ ನೇವಿ ಮತ್ತು ಸ್ಥಳೀಯ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರವಾಸಿಗರ ಪಾಲಿನ ಸ್ವರ್ಗವಾದ ಫರ್ನಾಸ್ ಸರೋವರ ಅದ್ಭುತ ಪ್ರವಾಸಿತಾಣವಾಗಿದ್ದು, ಸರೋವರದ ಸುತ್ತಲೂ ಕಲ್ಲಿನ ಗುಡ್ಡವಿದೆ. ಅಷ್ಟೇ ಅಲ್ಲ ಗುಹೆಗಳು, ಜಲಪಾತಗಳೂ ಇದೆ. ಇಲ್ಲೊಂದು ಜಲವಿದ್ಯುತ್ ಅಣೆಕಟ್ಟು ಕೂಡಾ ಇದೆ. ಆದರೆ ಇಂತಹ ಒಂದು ಅದ್ಭುತ ಪ್ರವಾಸಿ ತಾಣದಲ್ಲಿ ಈ ರೀತಿಯ ದುರಂತ ನಡೆದಿರುವುದು ವಿಪರ್ಯಾಸ. ಈ ಘಟನೆಯನ್ನು ಕಣ್ಣಾರೆ ನೋಡಿದವರಂತೂ ಕಂಗಾಲಾಗಿದ್ದಾರೆ.
ಭಾರೀ ಮಳೆಯಿಂದಾಗಿ ಬಂಡೆಯ ಒಂದು ಭಾಗವು ಕುಸಿದಿದೆ ಎಂದು ಅಲ್ಲಿನ ಗವರ್ನರ್ ರೋಮ ಜೆಮಾ ಹೇಳಿದ್ದಾರೆ.