ಭದ್ರತಾ ಸಿಬ್ಬಂದಿಯ ಲೋಪದಿಂದಾಗಿ ಫ್ಲೈ ಓವರ್ ನಲ್ಲೇ 20 ನಿಮಿಷಗಳ ಕಾಲ ಸಿಲುಕಿಕೊಂಡ ಪ್ರಧಾನಿ ಮೋದಿ | ನಾನು ಜೀವಂತವಾಗಿ ಬಂದಿದ್ದೇನೆ ಎಂದು ಪಂಜಾಬ್ ಸರ್ಕಾರಕ್ಕೆ ಮಾತಿನಲ್ಲೇ ಕುಟುಕಿದ ಮೋದಿ
ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪಂಜಾಬ್ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಭಾರೀ ಭದ್ರತಾ ಲೋಪವಾಗಿದೆ. ಭದ್ರತಾ ಸಿಬ್ಬಂದಿಯ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ನ ಫ್ಲೈ ಓವರ್ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡ ಘಟನೆ ನಡೆದಿದೆ.
ಪ್ರತಿಭಟನೆ ಕಾರಣದಿಂದಾಗಿ ಪಿಎಂ ಮೋದಿ ಅವರ ಸುಗಮ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಬಟಿಂಡಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಧಾನಿ ಮೋದಿ ಅವರು ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ ಪಂಜಾಬ್ ವಿಮಾನ ನಿಲ್ದಾಣಕ್ಕೆ ಮರಳಿದ್ದಾರೆ.
ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಬಟಿಂಡಾಗೆ ಪ್ರಧಾನಿ ಬಂದಿಳಿದರು. ಅವರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ಕರೆದೊಯ್ಯಬೇಕಿತ್ತು. ಆದರೆ ಮಳೆ, ಹವಾಮಾನದ ಕಾರಣ 20 ನಿಮಿಷ ಅವರು ಕಾಯಬೇಕಿತ್ತು. ಹವಾಮಾನ ಸುಧಾರಿಸದಿದ್ದ ಕಾರಣ, ರಸ್ತೆಯ ಮಾರ್ಗವಾಗಿ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕೆಂದು ನಿರ್ಧರಿಸಲಾಯಿತು. ಪಂಜಾಬ್ ಪೊಲೀಸರಿಂದ ಅಗತ್ಯ ಭದ್ರತೆಯೊಂದಿಗೆ ರಸ್ತೆಯಲ್ಲಿ ಪ್ರಯಾಣ ಬೆಳೆಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಲಾಯಿತು.
ಆದರೆ ಬೃಹತ್ ಪ್ರತಿಭಟನೆ ಕಾರಣದಿಂದಾಗಿ ಫ್ಲೈ ಓವರ್ ಬಳಿ ರಸ್ತೆ ಬ್ಲಾಕ್ ಆಗಿತ್ತು. ಇದರಿಂದ ಸುಮಾರು 20 ನಿಮಿಷಗಳ ಕಾಲ ಪ್ರಧಾನಿ ಮೋದಿ ಅವರು ಫ್ಲೈ ಓವರ್ನಲ್ಲೇ ಸಿಲುಕುವಂತಾಯಿತು. ಭದ್ರತಾ ಸಿಬ್ಬಂದಿ ಲೋಪವೇ ಇದಕ್ಕೆ ಕಾರಣ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಘಟನೆಯ ಬಳಿಕ ಬಟಿಂಡಾ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಮಾತನಾಡಿದ್ದ ಮೋದಿ, ನಾನು ಜೀವಂತವಾಗಿ ಬಂದಿದ್ದೇನೆ. ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ ಎಂದು ಪಂಜಾಬ್ ಸರ್ಕಾರಕ್ಕೆ ಮಾತಿನಲ್ಲೇ ಕುಟುಕಿದ್ದಾರೆ.