ಶಿರಸಿ:ಹೊಸ ವರ್ಷದ ಮುನ್ನ ದಿನ ಕಾಲೇಜೊಂದರ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಮೋಜು ಮಸ್ತಿ!! ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ವೀಡಿಯೋ ವೈರಲ್

ಹೊಸ ವರ್ಷದ ಮುನ್ನ ದಿನ ಶಿರಸಿಯ ಕಾಲೇಜೊಂದರ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವೊಂದು ಪ್ರವಾಸದ ನೆಪದಲ್ಲಿ ಮೋಜು ಮಸ್ತಿಗೆ ತೆರಳಿದ್ದು, ಸದ್ಯ ಯುವಕ-ಯುವತಿಯರು ಮೋಜಿನಲ್ಲಿ ತಲ್ಲೀನರಾಗಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಡಿಬಾರ್ ಮಾಡಿ ಆದೇಶ ಹೊರಡಿಸಲಾಗಿದೆ.

 

ಕಾಲೇಜಿನ ಸಮವಸ್ತ್ರದಲ್ಲೇ ಇರುವ ವಿದ್ಯಾರ್ಥಿ-ವಿದ್ಯಾರ್ಥಿನಿಗಳು ಅಮಲು ಪದಾರ್ಥ ಸೇವಿಸಿದ್ದಾರೆ ಎಂದು ಶಂಕಿಸಲಾಗಿದ್ದು, ಅದಕ್ಕೆ ತಕ್ಕಂತೆಯೇ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯ ಹಾಗೂ ಬಿಯರ್ ಬಾಟಲ್ ಹಿಡಿದಿರುವ ಫೋಟೋ ಕೂಡಾ ವೈರಲ್ ಆಗಿದೆ.

ನಗರದ ಯಲ್ಲಾಪುರ ನಾಕಾ ಬಳಿ ಇರುವ ಈ ಕಾಲೇಜು ಕಳೆದ ಕೆಲ ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದು, ಇಲ್ಲಿ ವಿದ್ಯಾಭ್ಯಾಸಕ್ಕಿಂತ ಹೆಚ್ಚಾಗಿ ಇತರ ಚಟುವಟಿಕೆಗಳು ವಿದ್ಯಾರ್ಥಿಗಳ ನಡುವೆ ನಡೆಯುತ್ತಿದೆ ಎಂಬ ಆರೋಪವು ಕೇಳಿಬಂದಿತ್ತು. ಇದೀಗ ಇಂತಹ ಆರೋಪಗಳಿಗೆ ಪ್ರತ್ಯಕ್ಷ ಸಾಕ್ಷಿಯಂತೆ ವೀಡಿಯೋ ಕೂಡಾ ವೈರಲ್ ಆಗಿದೆ.

ಅದಲ್ಲದೇ ಓರ್ವ ವಿದ್ಯಾರ್ಥಿಯ ಮೇಲೆ ಲವ್ ಜಿಹಾದ್ ಪ್ರಕರಣ ದಾಖಲಾಗಿದ್ದು, ಇದಾದ ಬಳಿಕ ಹಿಂದೂ ಸಂಘಟನೆಗಳು ಮಕ್ಕಳ ಮೇಲೆ ನಿಗಾ ಇಡುವಂತೆ ಕಾಲೇಜಿಗೆ ಮನವಿಯನ್ನು ಸಲ್ಲಿಸಿತ್ತು. ಅದಲ್ಲದೇ ಕಾಲೇಜು ಸುತ್ತ ಮುತ್ತಲ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಅನುಮಾನಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಬೇಕು, ಪೊಲೀಸರು ಕಾಲೇಜು ಅವರಣಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Leave A Reply

Your email address will not be published.