ಆಕಾಶದಿಂದ ಆಲಿಕಲ್ಲಿನಂತೆ ಟಪಟಪನೆ ಉದುರಿದವು ಮೀನುಗಳು !! | ಮೀನಿನ ಮಳೆಯ ವೀಡಿಯೋ ಫುಲ್ ವೈರಲ್
ಮಳೆ ಬರುವಾಗ ಮಳೆ ಜೊತೆಗೆ ಆಲಿಕಲ್ಲು ಬೀಳುವುದು ಸಾಮಾನ್ಯ. ಕೆಲವೊಮ್ಮೆ ಬಂಡೆಯಾಕಾರದ ಆಲಿಕಲ್ಲುಗಳು ಬಿದ್ದು, ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವುದು ಇದೆ. ಹಾಗೆಯೇ ಇನ್ನೊಂದು ಕಡೆ ಮೀನಿನ ಮಳೆಯೇ ಸುರಿದಿದೆ.
ಹೌದು,ಮೀನುಗಳು ಆಕಾಶದಿಂದ ಟಪಟಪನೆ ಉದುರಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಮಳೆ ಜೋರಾಗಿ ನದಿಗಳು ಉಕ್ಕಿ ಹರಿದು ಅಲ್ಲಿಂದ ಮೀನುಗಳು ರಸ್ತೆಗೆ ಬರುವುದು ಸಾಮಾನ್ಯ. ಆದರೆ ಈ ಘಟನೆ ಹಾಗಲ್ಲ, ನಿಜಕ್ಕೂ ಮೀನಿನ ಮಳೆಯಾಗಿದ್ದು ಇದರ ವೀಡಿಯೋ ಭಾರೀ ವೈರಲ್ ಆಗಿದೆ.
ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಸಿಎನ್‌ಬಿಸಿ ಈ ಕುರಿತು ವರದಿ ಮಾಡಿದೆ. ಟೆಕ್ಸಾಸ್‌ನಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆನೀರಿನ ಜೊತೆಗೆ ಮೀನುಗಳು ಬಿದ್ದಿವೆ. ರಸ್ತೆಯ ತುಂಬ ಮೀನುಗಳ ವಿಲವಿಲ ಒದ್ದಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. 4 ರಿಂದ 5 ಇಂಚಿನ ಬಿಳಿ ಬಣ್ಣದ ಮೀನುಗಳು ದಾರಿಯ ಮಧ್ಯೆ ಅಲ್ಲಲ್ಲಿ ಬಿದ್ದಿದೆ.
ಹಾಗಂತ ಮೀನುಗಳ ಮಳೆ ಈ ಹಿಂದೆಯೂ ಬಿದ್ದಿದೆ. 2017ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪ್ರಾಥಮಿಕ ಶಾಲೆಯೊಂದರ ಮೇಲೆ ನೂರಾರು ಮೀನುಗಳು ಮಳೆಯಂತೆ ಬಿದ್ದ ಘಟನೆ ವರದಿಯಾಗಿತ್ತು. ಇದರ ಜೊತೆ ಕಪ್ಪೆಗಳ ಮಳೆಯೂ ಬಿದ್ದಿರುವುದಾಗಿ ಹೇಳಲಾಗಿದೆ. ಭಾರಿ ಪ್ರವಾಹದ ವೇಳೆ ಪುಟ್ಟ ಜೀವಿಗಳು ಮುಳುಗಿ ಹೋಗುತ್ತವೆ. ನಂತರ ಬಲವಾದ ಗಾಳಿ ಬೀಸಿ ಮಳೆ ಬಂದಾಗ ಆಳದಲ್ಲಿರುವ ಜೀವಿಗಳು ಮೇಲೆ ಬಂದು ಮಳೆಯಂತೆ ಬೀಳುತ್ತವೆ ಎಂದಿದ್ದಾರೆ ನ್ಯಾಷನಲ್ ಜಿಯೋಗ್ರಫಿಯ ತಜ್ಞರು.