ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಲು ಅನುಮತಿ ಕೊಟ್ಟರೆ, ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಲ್ಯ ಧರಿಸಲು ಅನುಮತಿ ನೀಡಿ ಎಂದು ಗುಡುಗಿದ ವಿಶ್ವ ಹಿಂದೂ ಪರಿಷತ್
ಇತ್ತೀಚೆಗೆ ಉಡುಪಿಯ ಸರಕಾರಿ ಶಾಲೆಯಲ್ಲಿ ನಡೆದ ಘಟನೆ ಕರಾವಳಿಯಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿಯಿಂದ ಬಹಿಷ್ಕರಿಸಿದ ಬೆನ್ನಲ್ಲೇ ಇದೀಗ ವಿಶ್ವ ಹಿಂದೂ ಪರಿಷತ್ ನಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.
ಉಡುಪಿಯ ಸರಕಾರಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿಲು ಅನುಮತಿ ನೀಡಿದರೆ, ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಲ್ಯ ಧರಿಸಲು ಅನುಮತಿ ಕೊಡಲೇಬೇಕು ಎಂದು ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಲು ಅನುಮತಿ ಕೇಳುತ್ತಿರುವುದು ಸರಿಯಲ್ಲ. ಶಿಕ್ಷಣ ಸಂಸ್ಥೆ, ಶಾಲೆಗಳಲ್ಲಿ ಮಕ್ಕಳು ಒಂದೇ ರೀತಿಯಲ್ಲಿ ಇರಬೇಕು. ಶಾಲೆಗಳಲ್ಲಿ ಮತಕ್ಕೊಂದು ಉಡುಗೆ ತೊಡುಗೆ ಸರಿಯಲ್ಲ. ಏಕರೀತಿಯ ಶಿಕ್ಷಣ ಮತ್ತು ಏಕರೀತಿಯ ಸಮವಸ್ತ್ರ ಅಗತ್ಯ. ಶಿಕ್ಷಣ ನೀತಿ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ರೀತಿ ಇರಬೇಕು. ಒಂದು ವೇಳೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡಿದರೆ, ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಲ್ಯ ಧರಿಸಲು ಅನುಮತಿ ನೀಡಬೇಕು. ಇಲ್ಲವೇ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ರೀತಿಯ ಸಮವಸ್ತ್ರ ಕಡ್ಡಾಯ ಮಾಡಿ ಎಂದು ದಿನೇಶ್ ಮೆಂಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಧರಿಸಿದ್ದಕ್ಕಾಗಿ ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಯಿಂದ ಗೇಟ್ ಪಾಸ್ ನೀಡಲಾಗಿತ್ತು. ಈ ಕುರಿತು ವಿದ್ಯಾರ್ಥಿಗಳು, ಹಿಂದು ಧರ್ಮದಲ್ಲಿ ಕುಂಕುಮ ಇಡುವಂತೆ ಮುಸ್ಲಿಂ ಧರ್ಮದಲ್ಲಿ ಹಿಜಾಬ್ ಹಾಕುತ್ತೇವೆ. ಇದನ್ನು ವಿರೋಧಿಸಿದ್ದಾರೆ, ಸರಕಾರಿ ಶಾಲೆಯಲ್ಲಿಯೇ ಈ ರೀತಿಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ, ಇದು ಯಾವ ಸಮಾನತೆ ಎಂದು ಪ್ರಶ್ನಿಸಿದ್ದರು.