ಬರೋಬ್ಬರಿ 12,000 NGO ಗಳ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಗೆ ರದ್ದುಗೊಳಿಸಿದ ಕೇಂದ್ರ ಸರ್ಕಾರ !!
ದೇಶಾದ್ಯಂತ ಹಲವು ಎನ್ ಜಿಒ ಗಳ ಅಕ್ರಮಕ್ಕೆ ಇದೀಗ ಕೇಂದ್ರ ಸರ್ಕಾರ ಮೂಗುದಾರ ಹಾಕಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(FCRA) ನಿಯಮವನ್ನು ಪಾಲನೆ ಮಾಡದ್ದಕ್ಕೆ ಐಐಟಿ ದೆಹಲಿ ಹಳೆ ವಿದ್ಯಾರ್ಥಿಗಳ ಸಂಘ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ ಸೇರಿದಂತೆ ದೇಶದ 12,000ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆ(NGO)ಗಳ ನೋಂದಣಿಯನ್ನು ರದ್ದು ಗೊಳಿಸಲು ಕೇಂದ್ರ ಗೃಹ ಸಚಿವಾಲಯ ತೀರ್ಮಾನಿಸಿದೆ.
FCRA ಪರವಾನಿಗೆಯನ್ನು ನವೀಕರಣಗೊಳಿಸುವ ಸಂಬಂಧ 29 ಸೆಪ್ಟೆಂಬರ್ 2020 ರಿಂದ 31 ಡಿಸೆಂಬರ್ 2021ರ ಅವಧಿ ಒಳಗಡೆ 18,778 ಎನ್‍ಜಿಒಗಳು ಅರ್ಜಿ ಸಲ್ಲಿಸಿದ್ದವು. ಆದರೆ 6 ಸಾವಿರಕ್ಕೂ ಹೆಚ್ಚು ಎನ್‍ಜಿಒಗಳು ಅರ್ಜಿ ಸಲ್ಲಿಸಿರಲಿಲ್ಲ. ಇದನ್ನು ಹೊರತು ಪಡಿಸಿ ಉಳಿದಂತೆ ಈಗಾಗಲೇ 5,789 ಎನ್‍ಜಿಒ ಮತ್ತು ಸಂಘ ಸಂಸ್ಥೆಗಳ FCRA ನೋಂದಣಿ ಪರವಾನಿಗೆ ರದ್ದಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳಿಂದ ವರದಿಯಾಗಿದೆ.
ಐಐಟಿ ದೆಹಲಿ ಹಳೆ ವಿದ್ಯಾರ್ಥಿಗಳ ಸಂಘ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಭಾರತೀಯ ವೈದ್ಯಕೀಯ ಸಂಘ, ನೆಹರು ಮೆಮೊರಿಯಲ್ ಮ್ಯೂಸಿಯಮ್ ಹಾಗೂ ಗ್ರಂಥಾಲಯಗಳು, ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ ಸೇರಿ 12,000 ಸಂಸ್ಥೆಗಳ FCRA ನೋಂದಣಿ ಭದ್ರತೆ ಕಾರಣದಿಂದ ರದ್ದಾಗಿದೆ ಎಂದು ವರದಿಯಾಗಿದೆ.
ಈ ಸಂಸ್ಥೆಗಳು ಒಂದೋ FCRA ಪರವಾನಿಗೆ ನವೀಕರಣಗೊಳಿಸಲು ಅರ್ಜಿ ಸಲ್ಲಿಸದಿದ್ದ ಕಾರಣ ಅಥವಾ ಗೃಹಸಚಿವಾಲಯ ನಿಗದಿ ಪಡಿಸಿದ್ದ ಮಾನದಂಡಕ್ಕೆ ಅನುಗುಣವಾಗಿ ಮಾಹಿತಿ ನೀಡದ ಕಾರಣ ಅರ್ಜಿಗಳನ್ನು ತಿರಸ್ಕರಿಸಿದೆ.
FCRA ಸಿಂಧುತ್ವ ಕಳೆದುಕೊಂಡಿರುವ ಪಟ್ಟಿಯಲ್ಲಿ ಆಕ್ಸ್ಫಾಮ್ ಇಂಡಿಯಾ ಸಂಸ್ಥೆಗಳು, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಲಾಲ್ ಬಹದ್ದೂರ್ ಶಾಸ್ತ್ರಿ ಮೆಮೊರಿಯಲ್ ಫೌಂಡೇಷನ್, ಲೇಡಿ ಶ್ರೀರಾಮ್ ಕಾಲೇಜು, ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್ ಸೇರಿ ಹಲವು ಪ್ರತಿಷ್ಠಿತ ಸಂಘ ಸಂಸ್ಥೆ ಗಳಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಪ್ರಸ್ತುತ 16,829 ಎನ್‍ಜಿಒಗಳ FCRA ಪರವಾನಿಗೆ ಜಾಲ್ತಿಯಲ್ಲಿದ್ದು, ಈಗಾಗಲೇ 1,800 ಕ್ರಿಶ್ಚಿಯನ್, 250 ಹಿಂದೂ ಮತ್ತು 250 ಮುಸ್ಲಿಂ ಎನ್‍ಜಿಒಗಳ ಪರವಾನಿಗೆ ರದ್ದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಿದೇಶದಿಂದ ನೆರವು ಪಡೆದು ದೇಶದ ಒಳಗಡೆ ಉಗ್ರ ಚಟುವಟಿಕೆ ಸೇರಿದಂತೆ ದುಷ್ಟ ಚಟುವಟಿಕೆಗಳಿಗೆ ಎನ್‍ಜಿಒಗಳ ಹಣ ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ FCRA ಗೆ ತಿದ್ದುಪಡಿ ತಂದಿತ್ತು. ವಿದೇಶದಿಂದ ಹಣ ಪಡೆಯುವ ಎನ್‍ಜಿಒಗಳು ಕಡ್ಡಾಯವಾಗಿ ದೆಹಲಿಯ ಎಸ್‍ಬಿಐ ಕಚೇರಿಯಲ್ಲಿ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಿತ್ತು. ಅಲ್ಲದೇ ಹಣದ ಲೆಕ್ಕಪತ್ರ ಸಂಬಂಧ ಹಲವು ಬಿಗಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಎನ್‍ಜಿಒಗಳಿಗೆ ಸೂಚಿಸಿತ್ತು.