ಕೃಷಿಕರಿಗೆ ಸಿಹಿಸುದ್ದಿ | ಕೃಷಿ ಭೂಮಿ ಮಾರಾಟ ಮಾಡಲು ಕನಿಷ್ಠ ವಿಸ್ತೀರ್ಣದ ಮಿತಿ ಹೇರಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದ ರಾಜ್ಯ ಸರಕಾರ

ಇತ್ತೀಚಿಗೆ ಕೃಷಿ ಭೂಮಿ ಮಾರಾಟ ಮಾಡಲು ರಾಜ್ಯ ಸರಕಾರವು ಕನಿಷ್ಠ ವಿಸ್ತೀರ್ಣದ ಮಿತಿ ಹೇರಿ ಹೊರಡಿಸಿದ್ದ ಆದೇಶಕ್ಕೆ ರಾಜ್ಯಾದ್ಯಂತ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದ ಭೂ ಮಾಪನಾ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಸ್ಪಷ್ಟೀಕರಣದ ಸುತ್ತೋಲೆ ಹೊರಡಿಸಿದೆ.

 

ಹೊಸ ಆದೇಶದ ಪ್ರಕಾರ ಅಸ್ತಿತ್ವದಲ್ಲಿರುವ ಕೃಷಿ ಭೂಮಿ ವಿಸ್ತೀರ್ಣ ಎಷ್ಟೇ ಇದ್ದರೂ ಅದರಲ್ಲಿನ ಭಾಗಶಃ ಅಥವಾ ಸಂಪೂರ್ಣ ವಿಸ್ತೀರ್ಣವನ್ನು ಯಾವುದೇ ನಿರ್ಬಂಧ ಇಲ್ಲದೆ ಭೂ ಪರಿವರ್ತನೆ ಮಾಡಬಹುದಾಗಿದೆ. ಈ ರೀತಿಯಾಗಿ ಭಾಗಶಃ ವಿಸ್ತೀರ್ಣ ಭೂ ಪರಿವರ್ತನೆಯಾದ ಬಳಿಕ ಉಳಿದಿರುವ ಭೂಮಿ ಉಲ್ಲೇಖಿತ ಆದೇಶದಲ್ಲಿ ನಮೂದಿಸಿರುವ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಉಳಿದ ವಿಸ್ತೀರ್ಣಕ್ಕೆ ಕೃಷಿ ಭೂಮಿಯಾಗಿ ಪಹಣಿ ಮುಂದುವರಿಯುತ್ತದೆ. ಬಳಿಕ ಉಳಿದಿರುವ ಕೃಷಿ ಭೂಮಿ ಎಷ್ಟೇ ವಿಸ್ತೀರ್ಣವಾಗಿದ್ದರೂ ಕೂಡ ಮತ್ತೆ ಭಾಗಶಃ ಅಥವಾ ಪೂರ್ಣ ಭೂಮಿಯನ್ನು ಪರಿವರ್ತನೆ ಮಾಡಬಹುದಾಗಿದೆ.

ಹೊಸ ಆದೇಶಕ್ಕೆ ಅನುಗುಣವಾಗಿ ಮೋಜಿಣಿ ತಂತ್ರಾಂಶದಲ್ಲಿ ಸೂಕ್ತ ಅವಕಾಶ ನೀಡಲಾಗಿದೆ ಹಾಗೂ ಭೂ ಪರಿವರ್ತನೆಗೆ ಸ್ಕೆಚ್‌ ಮಾಡಬಹುದಾಗಿದೆ. ಅಲ್ಲದೆ ಕೃಷಿ ಭೂಮಿ ಮಾರಾಟಕ್ಕೆ 11ಇ ಸ್ಕೆಚ್‌ಗಾಗಿ ಪಡೆದಿರುವ ಅರ್ಜಿಗಳನ್ನು ಅವು 3 ಅಥವಾ 5 ಗುಂಟೆಗಿಂತ ಕಡಿಮೆ ಇದ್ದರೂ ಅರ್ಹತೆಗೆ ಅನುಗುಣವಾಗಿ 11ಇ ಸ್ಕೆಚ್‌ನ್ನು ನೀಡಬಹುದು. ಹೊಸ ಪಹಣಿ ರಚಿಸಬಹುದು ಎಂದು ಭೂ ಮಾಪನಾ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಶ್‌ ಮೌದ್ಗಿಲ್‌ ನೀಡಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಏನಾಗಿತ್ತು ಸಮಸ್ಯೆ?

ಡಿಸೆಂಬರ್‌ 7ರಂದು ಹೊರಡಿಸಿದ್ದ ಆದೇಶದ ಪ್ರಕಾರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮೂರು ಗುಂಟೆ (ಏಳೂವರೆ ಸೆಂಟ್ಸ್‌) ಹಾಗೂ ಉಳಿದ ಜಿಲ್ಲೆಗಳಿಗೆ ಕನಿಷ್ಠ 5 ಗುಂಟೆ(12.50 ಸೆಂಟ್ಸ್‌) ಜಮೀನಿಗಿಂತ ಕಡಿಮೆ ಜಮೀನನ್ನು ಮಾರಾಟ ಮಾಡುವಂತಿಲ್ಲ ಎಂದು ಆದೇಶಿಸಲಾಗಿತ್ತು. ಈ ನಿಯಮದಿಂದ ಸಣ್ಣ ರೈತರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಸರ್ಕಾರದ ಕಣ್ತೆರೆಸುವ ಕಾರ್ಯ ನಡೆದಿತ್ತು. ಇದೀಗ ಕೃಷಿ ಭೂಮಿ ಮಾರಾಟ ಮಾಡಲು ಕನಿಷ್ಠ ವಿಸ್ತೀರ್ಣದ ಮಿತಿ ಹೇರಿ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರಕಾರ ಹಿಂಪಡೆದಿದೆ.

Leave A Reply

Your email address will not be published.