ಅಪರಿಚಿತ ಹೆಣಗಳ ತಾಣವಾಗುತ್ತಿದೆ ಶಿರಾಡಿ-ಬಿಸ್ಲೆ ಘಾಟ್!! ಗುರುತು ಸಿಗದಂತೆ ಕೊಂದು ಗೋಣಿಯಲ್ಲಿ ಕಟ್ಟಿಟ್ಟು ಬೀದಿ ಬದಿ ಎಸೆಯುತ್ತಿರುವುದಾದರೂ ಯಾರು!??
ರಾತ್ರಿಯಾದರೆ ಸಾಕು ಅಲ್ಲಿನ ಜನ ಒಂಟಿಯಾಗಿ ರಸ್ತೆಯಲ್ಲಿ ನಡೆದಾಡಲು ಭಯಪಡುತ್ತಾರೆ.ಯಾವ ಸಮಯದಲ್ಲಿ ಏನಾಗುತ್ತದೋ ಎಂದು ಭಯದಲ್ಲಿಯೇ ದಿನ ದೂಡುತ್ತಿದ್ದಾರೆ. ಯಾಕೆಂದರೆ ಆ ಪ್ರದೇಶದಲ್ಲಿ ಅಪರಿಚಿತ ಶವಗಳು ಒಂಚೂರು ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗುತ್ತಿವೆ.
ಕಳೆದೆರಡು ದಿನಗಳ ಹಿಂದೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಈ ವರೆಗೂ ಆಕೆ ಯಾರೆಂಬುವುದನ್ನು ಪತ್ತೆ ಹಚ್ಚಲು ಆಗಿಲ್ಲ. ಯಾರೋ ಕೊಲೆಗಡುಕರು ನಿರ್ದಯವಾಗಿ ಕೊಲೆ ನಡೆಸಿ ರಸ್ತೆ ಬದಿ ಎಸೆದು ಹೋಗಿದ್ದಾರೆ ಎನ್ನಲಾಗುತ್ತಿದೆ.
ಅದಲ್ಲದೇ ಬಿಸಿಲೆ ಘಾಟ್ ವ್ಯಾಪ್ತಿಯ ಹಿಜ್ಜನಹಳ್ಳಿ ಎಂಬಲ್ಲಿ ಗೋಣಿಚೀಲವೊಂದರಲ್ಲಿ ಕಟ್ಟಿಟ್ಟ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿದ್ದು, ಈ ವರೆಗೂ ಮೃತದೇಹದ ಗುರುತು ಪತ್ತೆಯಾಗಿಲ್ಲ. ಮೊನ್ನೆಯ ದಿನ ಶೀರಾಡಿ ಘಾಟ್ ಕಾಡಿನಲ್ಲಿ ಮಹಿಳೆಯೊಬ್ಬರ ಶವವೂ ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗಿದ್ದು ಸಾರ್ವಜನಿಕರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.
ಪ್ರವಾಸಿ ತಾಣಗಳ ಬಳಿಯಲ್ಲಿ ಈ ರೀತಿ ಅಪರಿಚಿತ ಶವ ಕಂಡುಬರುವುದರಿಂದ ಗಾಬರಿಗೊಂಡಿರುವ ಸ್ಥಳೀಯ ನಿವಾಸಿಗಳಿಗೆ ಪೊಲೀಸ್ ಇಲಾಖೆ ಧೈರ್ಯ ತುಂಬುವ ಕಾರ್ಯ ಮಾಡಬೇಕಾಗಿದೆ. ಒಟ್ಟಿನಲ್ಲಿ ಕಳೆದ ಕೆಲ ಸಮಯಗಳಿಂದ ಈ ಭಾಗದಲ್ಲಿ ಕಂಡುಬರುತ್ತಿರುವ ಅಪರಿಚಿತ ಶವಗಳ ಹಿಂದೆ ಆತ್ಮಹತ್ಯೆ/ಕೊಲೆಯೋ ಎಂಬ ಬಗ್ಗೆ ಒಂದು ಸಣ್ಣ ಸುಳಿವು ಕೂಡಾ ಇಲ್ಲ. ಈ ಬಗ್ಗೆ ತನಿಖೆ ಆಗಬೇಕಾಗಿದ್ದು, ಪ್ರಶ್ನೆ ಹುಟ್ಟುಹಾಕುತ್ತಿರುವ ಅಪರಿಚಿತ, ಗುರುತು ಸಿಗದ ಶವಗಳಿಂದಾಗಿ ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ.