ಜಿಹಾದ್ ಗೆ ಪ್ರೇರಣೆ ಈ ಧರ್ಮಗುರುವಿನ ಬೋಧನೆ !! | ಮಸೀದಿಗೆ ಬೀಗ ಜಡಿದು ಆದೇಶ ಹೊರಡಿಸಿದ ಸರ್ಕಾರ
ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ರೀತಿಯಲ್ಲಿ ಧರ್ಮಗುರುವಿನ ಬೋಧನೆಗಳು ಇವೆ ಎಂಬ ಆರೋಪದಡಿಯಲ್ಲಿ ಆ ಮಸೀದಿಗೆ ಬೀಗ ಜಡಿಯಲು ಫ್ರಾನ್ಸ್ ಸರ್ಕಾರ ಆದೇಶ ನೀಡಿದೆ.
ಫ್ರಾನ್ಸ್ನ ಉತ್ತರ ಭಾಗದ ಬೋವೆ ಎಂಬ ನಗರದಲ್ಲಿನ ಧಾರ್ಮಿಕ ಕೇಂದ್ರವನ್ನು ಆರು ತಿಂಗಳು ಕಾಲ ಮುಚ್ಚಲು ಆದೇಶ ನೀಡಲಾಗಿದೆ. ಈ ಪಟ್ಟಣದಲ್ಲಿ ಸುಮಾರು 50 ಸಾವಿರ ಮಂದಿ ವಾಸಿಸುತ್ತಿದ್ದು, ಈ ಪಟ್ಟಣ ಉವಾಸ್ ಪ್ರಾಂತ್ಯ ವ್ಯಾಪ್ತಿ ಯಲ್ಲಿ ಬರುತ್ತಿದ್ದು, ಸ್ಥಳೀಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಧಾರ್ಮಿಕ ಕೇಂದ್ರದಲ್ಲಿ ನೀಡಲಾಗುತ್ತಿದ್ದ ಧರ್ಮ ಬೋಧನೆಗಳು ಜಿಹಾದ್ಗೆ ಪ್ರೇರಣೆ ನೀಡುತ್ತಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು.
ವರದಿಯ ಪ್ರಕಾರ, ಫ್ರಾನ್ಸ್ನ ಉತ್ತರ ಪ್ರದೇಶದಲ್ಲಿ ನೆಲೆಗೊಂಡಿರುವ ಮಸೀದಿಯ ಇಮಾಮ್, ಜಿಹಾದಿ ಹೋರಾಟಗಾರರನ್ನು “ಹೀರೋಗಳು” ಎಂದು ಉಲ್ಲೇಖಿಸಿದ್ದಾರೆ ಮತ್ತು ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಧರ್ಮಗುರು ಕ್ರಿಶ್ಚಿಯನ್ನರ, ಸಲಿಂಗ ಕಾಮಿಗಳ ಹಾಗೂ ಯೆಹೂದಿಗಳ ವಿರುದ್ಧ ಪ್ರಚೋದನಾಕಾರಿಯಾಗಿ ಮಾತನಾಡಿದ್ದರು ಎಂದು ಫ್ರಾನ್ಸ್ ಗೃಹ ಸಚಿವ ಗೆರಾಲ್ಡ್ ಡಾರ್ಮನಿನ್ ಎರಡು ವಾರಗಳ ಹಿಂದೆ ಆರೋಪಿದ್ದರು. ಈ ಹಿನ್ನೆಲೆಯಲ್ಲಿ ಆರು ತಿಂಗಳ ಕಾಲ ಮಸೀದಿಯನ್ನು ಮುಚ್ಚಲಾಗಿದೆ. ಅದಲ್ಲದೆ ಉಗ್ರವಾದದೊಂದಿಗೆ ಸಂಪರ್ಕಗಳನ್ನು ಹೊಂದಿರುವ ಶಂಕಿತ ಎಲ್ಲಾ ಇಸ್ಲಾಮಿಕ್ ಸ್ಥಳಗಳಲ್ಲಿ ಫ್ರೆಂಚ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.