ತುಳುನಾಡಿನ ಏಕೈಕ ನಾಗಸಾಧು – ತಪೋನಿಧಿ ನಾಗಸಾಧು ಬಾಬಾ ಶ್ರೀ ವಿಠ್ಠಲ್‌ಗಿರಿ ಮಹಾರಾಜ್
ಮನಸ್ಸು ಮಾಣಿಕ್ಯದಂತೆ, ಶುದ್ಧ ಚಿತ್ತದಿ ಬದುಕಬೇಕಾದರೆ ವ್ಯಕ್ತಿಯ ಅಂತರಾಳದಲ್ಲಿ ಆಧ್ಯಾತ್ಮದ ಒಲವು ಇರಬೇಕು. ಜಪತಪಗಳ ಮೂಲಕ ಏಕಾಗ್ರತೆಯತ್ತ ಮನಸ್ಸನ್ನು ಕೇಂದ್ರೀಕರಿಸಬೇಕು. ಇದು ಎಲ್ಲರಿಂದಲೂ ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ನಿಯಂತ್ರಿಸಲು ಎಲ್ಲರಿಂದಲೂ ಸಾಧ್ಯವಾಗದ ಮಾತು. ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟು, ಕಾಮನೆಗಳನ್ನು ಕಟ್ಟಿ ಹಾಕಿ ಸರ್ವಸಂಗ ಪರಿತ್ಯಜಿಸಿ ಸಮಾಜಕ್ಕಾಗಿ ಬದುಕುತ್ತಿರುವವರು ನಮ್ಮ ನಿಮ್ಮ ನಡುವಲ್ಲಿದ್ದಾರೆ. ಅವರಲ್ಲಿ ತುಳುನಾಡಿನಲ್ಲಿ ಅಗ್ರಗಣ್ಯರಾಗಿರುವವರು ಶಿವಭಕ್ತ ಪೂಜನೀಯ ತಪೋನಿಧಿ ನಾಗಸಾಧು ಬಾಬಾ ಶ್ರೀ ವಿಠ್ಠಲ್‌ಗಿರಿ ಮಹಾರಾಜ್‌ರವರು.
ನಡೆ – ನುಡಿಯಲ್ಲಿ ತಾಯಿಯ ಮಮತೆಯನ್ನು ತುಂಬಿಕೊಂಡು, ತಪ್ಪು ದಾರಿಯಲ್ಲಿ ನಡೆಯುವ ಯುವಮನಸ್ಸುಗಳನ್ನು ಸರಿ ದಾರಿಯತ್ತ ನಡೆಸುವಲ್ಲಿ ಪೂಜನೀಯರ ಪಾತ್ರ ಮಹತ್ವದ್ದು. ಕುಡಿತದ ಚಟವನ್ನು ವಿರೋಧಿಸುವ ಗುರೂಜಿಯವರು ಸಮಾಜದಲ್ಲಿ ಯುವಕರನ್ನು ಕುಡಿತದಿಂದ ಮುಕ್ತಗೊಳಿಸಬೇಕು ಎಂದು ತುಂಬಾ ಶ್ರಮಿಸುತ್ತಿದ್ದಾರೆ. ಸಮಾಜ ಎಲ್ಲಿ ತಪ್ಪಿ ಹೋಗುತಿದೆ ಎಂಬುದನ್ನು ತುಂಬಾ ಅಚ್ಚುಕಟ್ಟಾಗಿ ತಿಳಿದುಕೊಂಡ ಗುರೂಜಿಯವರು ಅದನ್ನು ಸರಿಪಡಿಸುವ ಸಲುವಾಗಿ ಹಲವಾರು ಚಿಂತನೆಗಳನ್ನು ಯುವಮನಸ್ಸುಗಳಲ್ಲಿ ಬಿತ್ತುತ್ತಿದ್ದಾರೆ.
ಗುರೂಜಿಯವರ ಬಗ್ಗೆ ಹೇಳುವುದಾದರೆ ಇವರು ನಮ್ಮ ತುಳುನಾಡಿನ ಏಕಮಾತ್ರ ನಾಗಸಾಧು. ಬಲುಕಠಿಣ ತಪ್ಪಸ್ಸು ಸಿದ್ಧಿಸಿಕೊಂಡು, ಹಲವು ಹಿರಿಯ ಸಿದ್ಧಿಪುರುಷ ನಾಗಸಾಧುಗಳಿಂದ ದೀಕ್ಷೆ ಪಡೆದವರು. ಇವರ ಪೂರ್ವಾಶ್ರಮದ ಬಗ್ಗೆ ನೋಡುವುದಾದರೆ… ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದಲ್ಲಿ 1976 ಜೂನ್ 20ರಂದು ರುಕ್ಮಯ ಪೂಜಾರಿ ಮತ್ತು ಸರೋಜಿನಿ ಪೂಜಾರ್ತಿ ದಂಪತಿಗಳ ಪಂಚಮ ಪುತ್ರನಾಗಿ ಜನಿಸಿದ ಇವರ ಪೂರ್ವಾಶ್ರಮದ ಶುಭನಾಮ ಶ್ರೀ ವಿಠ್ಠಲ್ ಪೂಜಾರಿ ಶಾಲಾಬಳಿ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಡಗಬೆಳ್ಳೂರಿನಲ್ಲಿ, ಪ್ರೌಢಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವು ಇಲ್ಲಿ ಪೂರೈಸಿದರು.
ಶಿಕ್ಷಣ ಮುಗಿಸಿ ನಂತರ ಬದುಕಿನ ದಾರಿಯನ್ನು ಹುಡುಕುತ್ತ ಸಾಗಿದ ಗುರೂಜಿಯವರು
ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬರಿಗಾಲ ಶ್ವೇತವಸ್ತ್ರ ಸಂತ ಸ್ವರ್ಗೀಯ ಬಿ.ಸಿ.ರೋಡ್ ಶ್ರೀ ವೆಂಕಟರಮಣ ಹೊಳ್ಳರ ಮಾರ್ಗದರ್ಶನದಲ್ಲಿ ಬೆಳೆದರು. ಮುಂದಕ್ಕೆ ಧರ್ಮ ಜಾಗರಣದ ಪೂರ್ಣಾವಧಿ ಕಾರ್ಯಕರ್ತನಾಗಿ, ಪ್ರಚಾರಕರಾಗಿ ಅತ್ಯುತ್ತಮ ಸಂಘಟಕರಾಗಿ ಹೊರಹೊಮ್ಮಿದರು.
ತಂದೆಯ ಕಾಲಾನಂತರ ತಾಯಿಯ ಸೇವೆಯನ್ನು ಮಾಡುತ್ತಾ ಸ್ವಲ್ಪ ಸಮಯ ಕಾಲ ಕಳೆದವರು ತಾಯಿಯೂ ಸ್ವರ್ಗಸ್ಥರಾದ ಬಳಿಕ ಜೀವನದಲ್ಲಿ ಎಲ್ಲವೂ ಶೂನ್ಯವೆಂಬ ಅಧ್ಯಾತ್ಮದ ಸತ್ಯವಾದ ಒಳತಿರುಳನ್ನರಿತು ಶಿವಧ್ಯಾನದತ್ತ ಮುಖ ಮಾಡಿ, ಮುಂದೆ ಆಧ್ಯಾತ್ಮದ ಸರ್ವಶಿಕ್ಷಣವನ್ನು ಪಡೆಯಬೇಕೆನ್ನುವ ಸದುದ್ದೇಶದಿಂದ ಗುರುಗಳಾದ ಮಹಾಂತ್ ರಾಮ್ ಜಿ ದಾಸ್, ಮಹಾರಾಜ್ ದಿಗಂಬರ್ ಅಖಾಡ ಜಮ್ಮು, ಪ್ರಾಚೀನ್ ಉದಾಸೀನ್ ಅಖಾಡದ ಪೈಲ್ವಾನ್ ಬಾಬಾಜಿ, ಪಂಚಾಯಿತಿ ಮಹಾನಿರ್ವಾಣಿ ಅಖಾಡದ ಮಹಾಂತ್ ವಿನೋದ್‌ಗಿರಿ ಜಿ ಮಹಾರಾಜ್ ಜೀಯವರ ಬಳಿ ಪೂರೈಸಿ ಇದೀಗ ಸರ್ವ ನಾಗಾ ಅಖಾಡಗಳ ಆಶಯದಂತೆ ಪ್ರಸ್ತುತ ತಪೋನಿಧಿ ಪಂಚಾಯಿತಿ ಆನಂದ್ ಅಖಾಡದ 1008, ಪರಮಹಂಸ್ ಬಾಬಾ ಬಣ್ಖಂಡಿ ಗಿರಿ ಜಿ ಮಹಾರಾಜ್ ಅವರ ಪ್ರೀತಿಯ ಶಿಷ್ಯರಾಗಿ ದೇವಭೂಮಿ ಹರಿದ್ವಾರದ ಗಂಗಾ ತೀರದಲ್ಲಿ ತಪೋನಿರತರಾಗಿ ಸಮಾಜದ ಒಳಿತಿಗಾಗಿ ತಪೋವಿದ್ಯೆ ಪಡೆಯುತ್ತಿದ್ದಾರೆ.
ಬಾಬಾ ಗುರೂಜಿಯವರು ಸರ್ವ ಹಿಂದೂ ಧರ್ಮದ ರಕ್ಷಣೆಗಾಗಿಯೇ ನಾಗಸಾಧು ದೀಕ್ಷೆ ಪಡೆದವರು. ಪುರಾತನ ಹಿಂದೂ ದೇವಾಲಯಗಳ ಉಳಿವಿಗಾಗಿ ತಪೋ ಸಿದ್ಧಿಯನ್ನು ಆಚರಿಸಿದವರು. ಹಿಂದೂ ದೇವಾಲಯಗಳ ಉಳಿವಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎನ್ನುವ ಗುರೂಜಿಯವರು ಈ ನೆಲೆಯಲ್ಲಿ ಹಲವಾರು ಯೋಜನೆಗಳನ್ನು ಯುವಮನಸ್ಸುಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಲು ಹೊರಟಿರುವ ತುಳುನಾಡಿನ ಏಕಮಾತ್ರ ನಾಗಸಾಧುವಾದ ಗುರೂಜಿ ತುಳುನಾಡಿನ ಮೇಲಿನ ಪ್ರೀತಿಯಿಂದ ತನ್ನ ಜನ್ಮ ಭೂಮಿಗೆ ಪಾದಸ್ಪರ್ಶ ಮಾಡಿ ಕಾರಿಂಜ ಶಿವ-ಪಾರ್ವತಿ ಸನ್ನಿಧಿಯಲ್ಲಿ ನೆಲೆಸಿ ದೇವರ ಸನ್ನಿಧಿಯ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಯನ್ನು ತಡೆಯುವಲ್ಲಿ ಹೋರಾಟದ ಪಂಜನ್ನು ಹಚ್ಚಿ ಶ್ರೀ ಕ್ಷೇತ್ರದ ಉಳಿವಿಗೆ ಮುನ್ನುಡಿ ಹಾಕಿ, ಪ್ರಾಣ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದರು. ಇಂತಹ ಗುರೂಜಿಯವರನ್ನು ಗೌರವಪೂರ್ವಕವಾಗಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆಯುವುದು ನಮೆಲ್ಲರ ಸೌಭಾಗ್ಯವೇ ಸರಿ.
✍?ಸುಶಾಂತ್ ಪೂಜಾರಿ ಕನ್ನಡಿಕಟ್ಟೆ