11 ವೈದ್ಯರು ಸೇರಿ ಡೆತ್ ಸರ್ಟಿಫಿಕೇಟ್ ಕೊಟ್ಟ ವ್ಯಕ್ತಿ ಗಂಗಾಜಲ ಬಿಟ್ಟಾಗ ಎದ್ದು ಕೂತ !
ರೋಗಿಯೊಬ್ಬ ಮೃತಪಟ್ಟಿರುವುದಾಗಿ ವೈದ್ಯರು ಸರ್ಟಿಫಿಕೇಟ್ ಕೊಟ್ಟ ನಂತರ ಅವರು ಬದುಕಿಬಂದಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಸತೀಶ್ ಭಾರದ್ವಾಜ್ (62) ಎಂಬವರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಅವರ ಬಾಯಿಗೆ ಗಂಗಾಜಲ ಹಾಕುತ್ತಿದ್ದಾಗ ಕಣ್ಣುತೆರೆದು ಮಾತನಾಡಿದ ಅಚ್ಚರಿ ಘಟನೆ ಇದಾಗಿದ್ದು, ಕುಟುಂಬಸ್ಥರು ಹೌಹಾರಿ ಹೋಗಿದ್ದಾರೆ.
ಸತೀಶ್ ಭಾರದ್ವಾಜ್ ಅವರಿಗೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇವರು ಮೃತಪಟ್ಟಿರುವುದಾಗಿ ಭಾನುವಾರ (ಡಿ.26) 11 ಮಂದಿ ತಜ್ಞ ವೈದ್ಯರು ಸರ್ಟಿಫಿಕೇಟ್ ಕೊಟ್ಟರು. ಇವರನ್ನು ಕಳೆದುಕೊಂಡ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದರು.
ನಂತರ ಮಧ್ಯಾಹ್ನ 3 ಗಂಟೆ ಸಮಯಕ್ಕೆ ಅಂತ್ಯಕ್ರಿಯೆ ಮಾಡಲು ಟಿಕ್ರಿ ಖುರ್ದ್ ಪ್ರದೇಶದಲ್ಲಿರುವ ಸ್ಮಶಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಕೊನೆಯ ವಿಧಿವಿಧಾನದಂತೆ ಅವರ ಬಾಯಿಗೆ ಗಂಗಾಜಲ ಹಾಕಲಾಗಿದೆ. ಗಂಗಾಜಲ ಬಾಯಿಗೆ ಹೋಗುತ್ತಿದ್ದಂತೆಯೇ ವೃದ್ಧ ಕರೆದು ಮಾತನಾಡಲು ಶುರು ಮಾಡಿದ್ದಾರೆ.
ಇದನ್ನು ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷಿಸಿದ ವೈದ್ಯರು, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ!