ಇಂದು ಸರ್ವೆ ಸಂತಾನ ಶ್ರೀ ಸುಬ್ರಹ್ಮಣ್ಯೇಶ್ಬರ ದೇವರಿಗೆ ಬ್ರಹ್ಮಕಲಶಾಭಿಷೇಕ
ಪುತ್ತೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದ್ದು,ಡಿ.26ರಂದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಇದಕ್ಕಾಗಿ ದೇವಸ್ಥಾನವನ್ನು ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿದೆ.ಸಂತಾನ ಶ್ರೀ ಸುಬ್ರಹ್ಮಣ್ಯ್ಯೇಶ್ವರ ದೇವರೆಂದೆ ಪ್ರಸಿದ್ದಿ ಪಡೆದಿರುವ ,ಬೇಡಿದವರಿಗೆ ಮಾಂಗಲ್ಯ ಭಾಗ್ಯ,ಸಂತಾನ ಭಾಗ್ಯ ಕರುಣಿಸುವ ಸುಬ್ರಹ್ಮಣ್ಯನ ಬ್ರಹ್ಮಕಲಶವನ್ನು ಕಣ್ತುಂಬಿಸಿಕೊಳ್ಳಲು ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಡಿ.26ರಂದು ಬೆಳಗ್ಗೆ 7ಕ್ಕೆ ಗಣಪತಿ ಹೋಮ, 10 ಗಂಟೆಗೆ ರತ್ನನ್ಯಾಸಾದಿ ಪೀಠ ಪ್ರತಿಷ್ಠೆ ಬಳಿಕ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಪ್ರತಿದಿನ ಅನ್ನದಾನ ಸೇವೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸಾಯಂಕಾಲ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತಿತರರು ಭಾಗವಹಿಸುವರು. ಅಂದು ಮಧ್ಯಾಹ್ನ ಭಕ್ತಿ ರಸಮಂಜರಿ, ರಾತ್ರಿ ನೃತ್ಯಗಾನ ವೈಭವ ಕಾರ್ಯಕ್ರಮ ನಡೆಯಲಿದೆ.
ದೇವಾಲಯ ನಿರ್ಮಾಣದ ವೇಳೆ ಗ್ರಾಮದ ಭಕ್ತರು ದೇವಸ್ಥಾನಕ್ಕೆ ಮರಗಳನ್ನು ದಾನ ಮಾಡಿದ್ದಾರೆ. ಕಡಿದ ಮರಗಳ ಬದಲಿ ಮತ್ತೆ ಅದೇ ಸ್ಥಳದಲ್ಲಿ ಗಿಡ ಬೆಳೆಸುವ ವಿನೂತನ ಯೋಜನೆಯನ್ನು ದೇವಸ್ಥಾನ ಹಮ್ಮಿಕೊಂಡಿದೆ. ಮುಂದಿನ ಜೂನ್ನಲ್ಲಿ ಗ್ರಾಮದ ಮನೆಗೊಂದು ಗಿಡವನ್ನು ದೇವರ ಪ್ರಸಾದ ರೂಪವಾಗಿ ವಿತರಿಸಲಾಗುವುದು. ದೇವಳದ ಖಾಲಿ ಜಾಗಗಳಲ್ಲಿ ಹಸಿರು ಬೆಳೆಸಲಾಗುವುದು. ದೇವಳದ ವತಿಯಿಂದ ಕನಿಷ್ಠ 1500 ಗಿಡಗಳನ್ನು ಬೆಳೆಸುವ ಗುರಿ ಇದೆ.