ಮಂಗಳೂರು : ಎನ್ಐಟಿಕೆಯ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಮಂಗಳೂರು: ಸುರತ್ಕಲ್ ನ ಎನ್‌ಐಟಿಕೆ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಬಿಹಾರದ ಜಮುಯಿ ಜಿಲ್ಲೆಯ ಓರೈಯಾ ಗ್ರಾಮದ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಸೌರವ್(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಸೌರವ್ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು,ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.ಬೆಳಗ್ಗೆ 8 ಗಂಟೆಯ ವೇಳೆಗೆ ಸೌರವ್ ರೂಂ ನಿಂದ ಹೊರಬಂದಿರದ ಕಾರಣ 9.30 ರ ವೇಳೆ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಆತನ ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಬಡ ಕುಟುಂಬದ ಸದಸ್ಯನಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಾಲ ಪಡೆದಿದ್ದ. ಅಲ್ಲದೇ ಆರೋಗ್ಯದಲ್ಲೂ ತೊಂದರೆ ಇರುವ ಕಾರಣ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.ಕೆಲಸ ಸಿಗುತ್ತದೆಯೋ ಗೊತ್ತಿಲ್ಲ, ಸಾಲ ಮಾಡಿ ಶಿಕ್ಷಣ ಮಾಡುತ್ತಿದ್ದೇನೆ ಎಂದು ತಂದೆ ಸುರೇಶ್ ಪ್ರಸಾದ್ಗೆ ತಿಳಿಸುವಂತೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಹೇಳಿದ್ದಾರೆ.
ಸೌರವ್ ಪೋಷಕರಿಗೆ ಆತನ ಸಾವಿನ ವಿಚಾರ ತಿಳಿಸಲಾಗಿದ್ದು, ಆರ್ಥಿಕ ಸಮಸ್ಯೆಯಿಂದ ಅವರಿಗೆ ಬರಲಾಗುವುದಿಲ್ಲ ಎಂದು ತಿಳಿಸಲಾಗಿತ್ತು.
ಆದರೆ ಎನ್‌ಐಟಿಕೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಹಣಕಾಸಿನ ನೆರವು ಒದಗಿಸಲಿದ್ದು,ಮೃತದೇಹವನ್ನ ಪಾಟ್ನಾ ಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.