ಕಳ್ಳ ಪತಿಯನ್ನು ಬಚಾವ್ ಮಾಡಲು ಪೊಲೀಸರಿಗೇ ಮೆಣಸಿನ ಪುಡಿ ಎರಚಿದ ಖತರ್ನಾಕ್ ಹೆಂಡತಿ!!

ಗಂಡ ಎಷ್ಟೇ ದೊಡ್ಡ ಕ್ರಿಮಿನಲ್ ಆಗಿದ್ದರೂ ಆತ ಪೊಲೀಸರ ಕಣ್ಣಿಗೆ ಬೀಳದಂತೆ ಪತ್ನಿ ನೋಡಿಕೊಳ್ಳುವ ಕಥೆ ನಿನ್ನೆ ಮೊನ್ನೆಯದಲ್ಲ. ಹಾಗೆಯೇ ಇನ್ನೊಂದು ಕಡೆ ಪತಿಯನ್ನು ಬಚಾವ್ ಮಾಡಲು ಮಹಿಳೆ ಪೊಲೀಸ್ ತಂಡಕ್ಕೆ ಮೆಣಸಿನ ಪುಡಿ ಎರಚಿರುವ ಘಟನೆ ತೆಲಂಗಾಣದ ಅತ್ತಾಪುರದಲ್ಲಿ ನಡೆದಿದೆ.

 

ತೆಲಂಗಾಣದ ಎಸ್‍ಟಿಎಫ್ ಪೊಲೀಸರಿಗೆ ಮತ್ತು ರಾಜೇಂದ್ರನಗರ ಪೊಲೀಸರ ತಂಡದ ಮೇಲೆ ಈ ಕೃತ್ಯ ನಡೆದಿದೆ. ಸದ್ಯ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮಹಿಳೆ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 353ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

2019 ರ ಕೊಲೆ ಪ್ರಕರಣದ ವಾಟೆಂಡ್ ಕ್ರಿಮಿನಲ್ ಆಗಿದ್ದ ಮಹಿಳೆಯ ಪತಿಯನ್ನು ಬಂಧಿಸಲು ಉತ್ತರಾಖಂಡ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಹೈದರಾಬಾದ್‍ನ ಅತ್ತಾಪುರದ ಸುಲೇಮಾನ್ ನಗರದಲ್ಲಿ ಆರೋಪಿ ವಾಸಿಂ ಪತ್ನಿಯನ್ನು ಭೇಟಿಯಾಗಿರುವ ಬಗ್ಗೆ ಪೊಲೀಸರಿ ಮಾಹಿತಿ ಸಿಕ್ಕಿದೆ. ಈ ವಿಚಾರವನ್ನು ಖಚಿತಪಡಿಸಿಕೊಂಡ ಉತ್ತರಾಖಂಡದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಪೊಲೀಸ್ ತಂಡದೊಂದಿಗೆ ವಾಸಿಂ ಮನೆಗೆ ತೆರಳಿದೆ. ಈ ವೇಳೆ ಅವರೊಂದಿಗೆ ರಾಜೇಂದ್ರನಗರ ಪೊಲೀಸ್ ಠಾಣೆಯ ಮೂವರು ಕಾನ್‍ಸ್ಟೇಬಲ್‍ಗಳು ತೆರಳಿದ್ದರು.

ಪೊಲೀಸರು ಕಂಡ ಕೂಡಲೇ ಮಹಿಳೆ ಎಸ್‍ಟಿಎಫ್ ಕಾನ್‍ಸ್ಟೇಬಲ್ ಗಳ ಕಣ್ಣಿಗೆ ಮೆಣಸಿನ ಪುಡಿ ಎರಚಿ ಪತಿಗೆ ಪರಾರಿಯಾಗಲು ಸಹಾಯ ಮಾಡಿದ್ದಾಳೆ. ಅಲ್ಲದೇ ತನಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಕಿರುಚಾಡಿ ನೆರೆಹೊರೆಯವರೆಲ್ಲಾ ಬಂದು ಸೇರುವಂತೆ ದೊಂಬಿ ಎಬ್ಬಿಸಿದ್ದಾಳೆ. ಈ ಮಧ್ಯೆ ಆರೋಪಿ ವಾಸಿಂ ಮನೆಯಿಂದ ಎಸ್ಕೇಪ್ ಆಗಿದ್ದಾನೆ.

Leave A Reply

Your email address will not be published.