ಎಲ್ಲಾ ಜಾತಿ, ಧರ್ಮಗಳನ್ನು ಪ್ರೀತಿಸುವವನೇ ನಿಜವಾದ ಹಿಂದೂ – ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ
ಎಲ್ಲಾ ಜಾತಿ, ಧರ್ಮಗಳನ್ನು ಪ್ರೀತಿಸುವವನೇ ನಿಜವಾದ ಹಿಂದೂ. ಆದರೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜಾತಿ-ಧರ್ಮ, ಒಳಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿ, ಧರ್ಮಗಳನ್ನ ಪ್ರೀತಿಸುವವನೇ ನಿಜವಾದ ಹಿಂದೂ. ಜಾತಿ-ಧರ್ಮಗಳನ್ನು ಕಟ್ಟುವಾಗ ಮತ್ತೊಂದು ಜಾತಿ-ಧರ್ಮದ ವಿರುದ್ಧ ಕಟ್ಟುವುದಿಲ್ಲ, ಎಲ್ಲರನ್ನು ಪ್ರೀತಿ ಮಾಡಬೇಕು ಎಂಬ ನಿಟ್ಟಿನಲ್ಲಿ ಕಟ್ಟಲಾಗುತ್ತದೆ. ಯಾವುದೇ ಜಾತಿ, ಧರ್ಮ ಅಂದರೆ ಅದು ತಾಯಿ ಇದ್ದಂತೆ. ಆಯಾಯ ಧರ್ಮದವರಿಗೆ ಅವರ ಧರ್ಮ, ಜಾತಿಯೇ ತಾಯಿ. ಇದು ಬಿಜೆಪಿಯವರಿಗೆ ಅರ್ಥವಾಗಬೇಕು ಎಂದು ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದರು.
ಮತಾಂತರ ಕಾಯ್ದೆಯ ಕಡತಕ್ಕೆ ಸಿದ್ದರಾಮಯ್ಯ ಸಹಿ ಹಾಕಿದ್ದರು ಎಂಬ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಸಹಿ ಹಾಕಿದ್ದರೆ ಅದರಲ್ಲಿ ಜನರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಯೋಚಿಸಿರುವುದಿಲ್ಲ. ಬಿಜೆಪಿಯವರು ವಿಧಾನಸೌಧದಲ್ಲಿ ಬಾಯಿ ಬಡಿದುಕೊಳ್ಳಬೇಕು ಅಷ್ಟೇ. ಆದರೆ ವಿಷಯ ಏನು ಎಂಬುದನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ನೆಪವಾಗಿ ಇಟ್ಟುಕೊಂಡಿದ್ದಾರೆ. ಬಿಜೆಪಿಯವರು ಇರುವ ಕಾನೂನನ್ನು ಬಿಗಿ ಮಾಡುವ ಅಗತ್ಯ ಇದೆ. ಆದರೆ ಮೂರೂವರೆ ವರ್ಷಗಳ ಕಾಲ ಸುಮ್ಮನಿದ್ದು ಈಗ ಮತಾಂತರ ಕಾಯ್ದೆ ತರಲು ಹೊರಟಿರುವ ಹಿಂದೆ ದುರುದ್ದೇಶ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶ ಹಾಗೂ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆ ಹಾಗೂ ಹಾನಗಲ್-ಸಿಂಧಗಿಯ ಉಪಚುನಾವಣೆ ಫಲಿತಾಂಶವನ್ನು ಗಮನಿಸಿದರೆ ಇಡೀ ರಾಜ್ಯದ ಜನರ ಭಾವನೆ ಬದಲಾವಣೆಯತ್ತ ಸಾಗಿದೆ ಎಂಬುದು ಕಂಡು ಬರುತ್ತಿದೆ. ಕಾಂಗ್ರೆಸ್ ಪಕ್ಷ ದೇಶ ಹಾಗೂ ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ನೀಡಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಭೂದಾನ, ರೈತರಿಗೆ ಉಚಿತ ವಿದ್ಯುತ್, ಅನ್ನಭಾಗ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಕಾಂಗ್ರೆಸ್‍ಗೆ ಸೇರುತ್ತದೆ. ಆದರೆ ಅನ್ನ ಭಾಗ್ಯಕ್ಕೂ ಕತ್ತರಿ ಹಾಕಿದ ಅಪಕೀರ್ತಿ ಬಿಜೆಪಿಯದ್ದು ಎಂದು ವ್ಯಂಗ್ಯವಾಡಿದರು.