ಐತಿಹಾಸಿಕ ಕೆಂಪುಕೋಟೆ ನನ್ನ ಆಸ್ತಿ, ನನಗೆ ಬಿಟ್ಟುಕೊಡಿ ಇಲ್ಲವೇ ಪರಿಹಾರ ನೀಡಿ ಎಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ !! | ಇಷ್ಟಕ್ಕೂ ಕೋಟೆ ನನ್ನ ಆಸ್ತಿ ಎಂದು ಅರ್ಜಿ ಸಲ್ಲಿಸಿದ ಮಹಿಳೆ ಯಾರು ಗೊತ್ತೇ??
1947ರ ಆಗಸ್ಟ್ 15ರಂದು ಸ್ವತಂತ್ರ ಭಾರತದ ಮೊದಲ ರಾಷ್ಟ್ರ ಧ್ವಜಾರೋಹಣ ನಡೆದದ್ದು ಕೆಂಪುಕೋಟೆಯ ಮೇಲೆಯೇ. ಇಂತಹ ಐತಿಹಾಸಿಕ ಕೆಂಪು ಕೋಟೆ ತನ್ನ ವಂಶ ಪಾರಂಪರ್ಯದ ಸೊತ್ತು. ಇದನ್ನು ಭಾರತ ಸರ್ಕಾರವು ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಹೀಗಾಗಿ ಅದನ್ನು ತನಗೆ ವಹಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ದಾವೆಯನ್ನು ದೆಹಲಿ ಉಚ್ಛ ನ್ಯಾಯಾಲಯ ತಳ್ಳಿ ಹಾಕಿದೆ.
ಸುಲ್ತಾನಾ ಬೇಗಂ ಎಂಬವರೇ ಕೆಂಪು ಕೋಟೆ ನಮ್ಮ ಪಾರಂಪರಿಕ ಸೊತ್ತು ಎಂದು ಅರ್ಜಿ ಸಲ್ಲಿಸಿದ ಮಹಿಳೆ. ಸುಲ್ತಾನಾ ಅವರ ಪತಿ ಮಿರ್ಜಾ ಮಹಮ್ಮದ್ ಬೆದರ್ ಭಕ್ತ್ ಎಂಬವರು ಮೊಘಲ್ ದೊರೆ ಎರಡನೇ ಬಹದೂರ್ ಶಾ ಜಾಫರ್ ಅವರ ಮೊಮ್ಮಗ. ಅವರು 1980 ರ ಮೇ 22 ರಂದು ಮೃತಪಟ್ಟಿದ್ದಾರೆ. ಹೀಗಾಗಿ ಕೆಂಪು ಕೋಟೆ ತನಗೆ ಸೇರಿದ್ದು. ಅದನ್ನು ತನಗೆ ಹಸ್ತಾಂತರಿಸಬೇಕು ಎಂದು ಅವರು ನ್ಯಾಯಾಲದಲ್ಲಿ ವಾದ ಮಂಡಿಸಿದ್ದರು.
ಅಲ್ಲದೇ, ಇದು ನಮ್ಮ ಕುಟುಂಬದ ಸೊತ್ತಾಗಿತ್ತು. ಇದನ್ನು 1857 ರಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಅಕ್ರಮವಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಹೀಗಾಗಿ ಕೆಂಪು ಕೋಟೆಯನ್ನು ಕೇಂದ್ರ ಸರ್ಕಾರ ತಮಗೆ ಹಸ್ತಾಂತರಿಸಬೇಕು. ಇಲ್ಲವೇ 1857 ರಿಂದ ಇಲ್ಲಿಯ ವರೆಗೆ ಭಾರತ ಸರ್ಕಾರವು ಕೆಂಪು ಕೋಟೆಯನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಕ್ಕೆ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಕೆಂಪು ಕೋಟೆ ತನ್ನ ಪಾರಂಪರಿಕ ಸೊತ್ತು ಎಂದು ಹಕ್ಕು ಮಂಡಿಸಿದ ಸುಲ್ತಾನಾ ಬೇಗಂ ಅವರ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ರೇಖಾ ಪಿಳ್ಳೈ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ಬಂದಿತ್ತು. ಅರ್ಜಿಯ ವಿಚಾರಣೆ ನಡೆಸಿ ಕೋರ್ಟ್, ಈ ಸಂಬಂಧ ನ್ಯಾಯಾಲಯಕ್ಕೆ ಬರಲು ಇಷ್ಟು ತಡಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿ ಅರ್ಜಿಯನ್ನು ತಳ್ಳಿ ಹಾಕಿದೆ.
‘ನನ್ನ ಇತಿಹಾಸದ ಜ್ಞಾನ ಕಡಿಮೆ ಇದೆ. ನಿಮ್ಮ ವಾದದ ಪ್ರಕಾರ 1857 ರಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ನಿಮಗೆ ಅನ್ಯಾಯ ಮಾಡಿದೆ. ಆದರೆ 150 ವರ್ಷದ ಬಳಿಕ ಯಾಕೆ ನ್ಯಾಯಾಲವನ್ನು ಸಮೀಪಿಸಿದ್ದೀರಿ? ಇಷ್ಟು ವರ್ಷ ಏನು ಮಾಡುತ್ತಿದ್ದೀರಿ?’ ಎಂದು ನ್ಯಾಯಮೂರ್ತಿ ಪ್ರಶ್ನೆ ಮಾಡಿದರು.
‘ಎಲ್ಲರಿಗೂ ಈ ವಿಷಯ ಗೊತ್ತಿದೆ. ಪ್ರತಿಯೊಬ್ಬರೂ ಇತಿಹಾಸ ಓದಿಕೊಂಡಿದ್ದಾರೆ. ಅದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಅರ್ಜಿ ಸಲ್ಲಿಸಲು ಇಷ್ಟು ತಡಮಾಡಿದ್ದೇಕೆ? ಅರ್ಜಿದಾರರ ಪೂರ್ವಜರೇ ಈ ಬಗ್ಗೆ ಯಾವುದೇ ತಕರಾರು ಎತ್ತಿಲ್ಲ. ಈಗ ಏಕೆ ಇವರು ಅರ್ಜಿ ಸಲ್ಲಿಸಿದ್ದಾರೆ?’ ಎಂದು ಮಹಿಳೆಯ ಪರ ವಕೀಲರಿಗೆ ಪ್ರಶ್ನಿಸಿ ಅರ್ಜಿಯನ್ನು ತಳ್ಳಿ ಹಾಕಿತು.