ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಬಿಂಬ ಪ್ರತಿಷ್ಠೆ
ಪುತ್ತೂರು: ಕೆದಂಬಾಡಿ ಸನ್ಯಾಸಿಗುಡ್ಡೆ ನೂತನ ಶಿಲಾಮಯ ಶ್ರೀರಾಮ ಮಂದಿರದ ಲೋಕಾರ್ಪಣೆ, ಸೀತಾ ಲಕ್ಷ್ಮಣ ಆಂಜನೇಯ ಸಹಿತ ಶ್ರೀರಾಮ ದೇವರ ಬಿಂಬ ಪ್ರತಿಷ್ಠೆ, ಶ್ರೀ ದುರ್ಗಾ ಪೀಠ, ಸದ್ಗುರು ಡಾ. ಎಸ್.ಆರ್. ಗೋಪಾಲನ್ ನಾಯರ್ ಗುರುಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ದ. 22 ರಂದು ಬೆಳಿಗ್ಗೆ 10.24 ರ ಕುಂಭ ಲಗ್ನ ಮುಹೂರ್ತದಲ್ಲಿ ಕ್ಷೇತ್ರದ ಪುರೋಹಿತರಾದ ಪಟ್ಲಮೂಲೆ ಕೃಷ್ಣಕುಮಾರ್ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು.
ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆಯಲ್ಲಿ ಭಕ್ತರಿಂದ ಆರಾಧನೆಗೊಳಪಡುತ್ತಿರುವ ಸುಮಾರು 75 ವರ್ಷಗಳ ಇತಿಹಾಸವಿರುವ ಶ್ರೀರಾಮ ಮಂದಿರದಲ್ಲಿ ಶಿಲಾಮಯ ಗರ್ಭಗುಡಿ ಸಹಿತ ನೂತನ ಮಂದಿರ ಲೋಕಾರ್ಪಣೆ, ಸಪರಿವಾರ ಶ್ರೀರಾಮ ದೇವರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಸಂಭ್ರಮದ ಕ್ಷಣಗಳು ಆರಂಭಗೊಂಡಿವೆ.
ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳಿಗಾಗಿ ಭಕ್ತಾಭಿಮಾನಿಗಳಿಂದ ಹಸಿರುವಾಣಿ ಕಾಣಿಕೆ ದ. 20 ರಂದು ಸಮರ್ಪಣೆಗೊಂಡಿತು.
ಕೆದಂಬಾಡಿ ಬೀಡು ಪಟ್ಟದ ಚಾವಡಿಯ ಆಡಳಿತ ಮೊಕ್ತೇಸರ ಬೆಟ್ಟಂಪಾಡಿ ಜಗದೀಶ್ ಬಲ್ಲಾಳ್ ತೆಂಗಿನಕಾಯಿ ಒಡೆದು ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು. ತಿಂಗಳಾಡಿ ದೇವಗಿರಿ ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ ಹಾಗೂ ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿ ಉಪಸ್ಥಿತರಿದ್ದರು.
ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಅರಿಯಡ್ಕ ಕರುಣಾಕರ ರೈ ಅತ್ರಿಜಾಲು, ಕಾರ್ಯದರ್ಶಿ ಶಿವರಾಮ ಗೌಡ ಇದ್ಯಪೆ, ಕೋಶಾಧಿಕಾರಿ ಚಂದ್ರಹಾಸ ಬಲ್ಲಾಳ್ ಕೆದಂಬಾಡಿ ಬೀಡು, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಗಣಪತಿ ಭಟ್ ಸನ್ಯಾಸಿಗುಡ್ಡೆ, ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರ್, ಕಾರ್ಯದರ್ಶಿ ಮುಂಡಾಳಗುತ್ತು ಮೋಹನ ಆಳ್ವ, ಕೋಶಾಧಿಕಾರಿ ಐ.ಸಿ. ಕೈಲಾಸ್ ಇದ್ಯಪೆ, ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ದಿನಕರ ರೈ ಮಾಣಿಪ್ಪಾಡಿ, ಕಾರ್ಯದರ್ಶಿ ಸೀತರಾಮ ಗೌಡ ಇದ್ಯಪೆ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಕಡಮಜಲು ಸುಭಾಸ್ ರೈ, ವಿವಿಧ ಸಮಿತಿಗಳ ಸಂಚಾಲಕರು ಮತ್ತು ಸದಸ್ಯರು, ಗ್ರಾಮಸ್ಥರು, ಊರ ಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡರು.