ರೈತ ಸಮುದಾಯಕ್ಕೆ ಸಿಹಿ ಸುದ್ದಿ |ಅತಿವೃಷ್ಟಿಯಿಂದ ಹಾನಿಗೀಡಾಗುವ ರೈತರ ಬೆಳೆಗಳಿಗೆ ನೀಡಲಾಗುವ ಪರಿಹಾರ ಮೊತ್ತ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ-ಬೊಮ್ಮಾಯಿ

ಬೆಳಗಾವಿ :ರೈತ ಸಮುದಾಯಕ್ಕೆ ಶುಭ ಸುದ್ದಿಯೊಂದಿದ್ದು,ಅತಿವೃಷ್ಟಿಯಿಂದ ಹಾನಿಗೀಡಾಗುವ ರೈತರ ಬೆಳೆಗಳಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ತಿಳಿಸಿದರು.

ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ಪ್ರಸ್ತುತ ನೀರಾವರಿ ವ್ಯಾಪ್ತಿಯಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‍ಗೆ 13500 ರೂ.ನೀಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ 11500 ರೂ. ನೀಡಲು ನಿರ್ಧರಿಸಿದ್ದು, ಇದರಿಂದ ರೈತರಿಗೆ ಹೆಕ್ಟೇರ್‍ಗೆ 25500 ರೂ ದೊರೆಯಲಿದೆ. ಒಣ ಬೇಸಾಯ ಜಮೀನಿನಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‍ಗೆ 6800 ರೂ ನೀಡಲಾಗುತ್ತಿದ್ದು, ಹೆಚ್ಚುವರಿಯಾಗಿ ಇನ್ನೂ 6800 ರೂ. ನೀಡಲು ತೀರ್ಮಾನಿಸಲಾಗಿದೆ.

ಬೆಳಗಾವಿ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿ ಸಂಭವಿಸಿದ್ದು, ಪರಿಹಾರ ನೀಡಲು ಬಿಟ್ಟು ಹೋಗಿದ್ದ 7600 ಮನೆಗಳಿಗೆ ಪರಿಹಾರ ಒದಗಿಸಲು ಹೊಸದಾಗಿ ಅನುಮೋದನೆ ನೀಡಲಾಗಿದ್ದು, ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ. ಪೂರ್ಣ ಹಾನಿಗೀಡಾಗಿದ್ದ 36698 ಮನೆಗಳ ಪೈಕಿ 18589 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 7097 ಮನೆಗಳು ಬಹುತೇಕ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಅತಿವೃಷ್ಟಿಯಿಂದ 12.69 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿ ಉಂಟಾಗಿದ್ದು ಪ್ರತಿಯೊಬ್ಬ ರೈತರ ಖಾತೆಗೆ ನೇರವಾಗಿ ಪರಿಹಾರ ಮೊತ್ತವನ್ನು ಜಮಾ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 1200 ಕೋಟಿ ರೂ. ಹೊರೆ ಉಂಟಾಗಲಿದೆ ಎಂದು ಅವರು ಹೇಳಿದರು.ಇದೇ ರೀತಿ ಅತಿವೃಷ್ಟಿಯಿಂದ ಹಾನಿಗೀಡಾದ ತೋಟಗಾರಿಕಾ ಬೆಳೆಗಳಿಗೆ ಪ್ರಸ್ತುತ ಹೆಕ್ಟೇರ್‍ಗೆ 18 ಸಾವಿರ ರೂ. ಪರಿಹಾರ ನೀಡಲಾಗುತ್ತಿದ್ದು, ಇದಕ್ಕೆ ಹೆಚ್ಚುವರಿಯಾಗಿ 10ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ ಎಂದರು.

Leave A Reply

Your email address will not be published.