ಯೂ ಟ್ಯೂಬ್ ನೋಡಿ ಪತ್ನಿಯ ಹೆರಿಗೆ ಮಾಡಿಸಿದ ಪತಿಮಹಾಶಯ | ಮಗು ಸಾವು, ಜೀವನ್ಮರಣ ಸ್ಥಿತಿಯಲ್ಲಿ ಪತ್ನಿ !
ರಾಣಿಪೇಟೆ: ಪತಿಯೊಬ್ಬ ತನ್ನ ಹೆಂಡತಿಯ ಹೆರಿಗೆಯನ್ನು ಯೂಟ್ಯೂಬ್ನಲ್ಲಿ ವಿಡಿಯೋ ನೋಡುತ್ತಾ ಮಾಡಲು ಹೋಗಿ ಮಗುವಿನ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಘಟನೆ ನಡೆದಿದೆ. ಅಲ್ಲದೇ ಆತನ ಪತ್ನಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಲ್ಲವನ್ನೂ ಯು ಟ್ಯೂಬ್ ನೋಡಿ ತಿಳಿಯುವ ಮತ್ತು ಕಲಿಯುವ ಯುಗದಲ್ಲಿ, ಈ ಮನುಷ್ಯ ತನ್ನ ಪತ್ನಿಯ ಹೆರಿಗೆಯನ್ನು ಯು ಟ್ಯೂಬ್ ನಲ್ಲಿ ಹೇಳಿದಂತೆ ಮಾಡಲು ಹೋಗಿದ್ದಾನೆ. ವಿನಾಕಾರಣ ತನ್ನ ಮಗುವನ್ನು ಬಲಿ ಪಡೆದು ಪತ್ನಿಯ ಜೀವದ ಜತೆ ಆಟ ಆಡಿದ್ದಾರೆ.
ಇಂತಹ ಘಟನೆ ತಮಿಳುನಾಡಿನ ರಾಣಿಪೇಟೆಯಲ್ಲಿ ನಡೆದಿದೆ. ಪತಿ ಮಹಿಳೆ ಹೆಸರು ಗೋಮತಿ ಎಂದು ತಿಳಿದುಬಂದಿದ್ದು, ಹೆರಿಗೆ ಸಮಯದಲ್ಲಿ ಅಪಾರ ರಕ್ತಸ್ರಾವವಾಗಿದೆ. ಹಾಗಾಗಿ ಮಗು ಹುಟ್ಟುವ ಸಮಯದಲ್ಲಿ ಆಕೆ ಪ್ರಜ್ಞಾಹೀನಳಾಗಿದ್ದು, ಬಳಿಕ ಗೋಮತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ವರ್ಷದ ಹಿಂದೆ ಲೋಗನಾಥನ್ ಮತ್ತು ಗೋಮತಿ ವಿವಾಹವಾಗಿದ್ದರು. ಅವರು ಡಿಸೆಂಬರ್ 13 ರಂದು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಡಿಸೆಂಬರ್ 18 ರ ನಂತರ ಗೋಮತಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಲೋಗನಾಥನ್ ತನ್ನ ಸಹೋದರಿ ಗೀತಾಳ ಸಹಾಯವನ್ನು ಕೋರಿದ್ದು, ಯೂಟ್ಯೂಬ್ನಲ್ಲಿ ವಿಡಿಯೋ ನೋಡಿಕೊಂಡು ಹೆರಿಗೆ ಮಾಡಲು ಪ್ರಯತ್ನಿಸಿದ್ದಾನೆ. ಗೋಮತಿಯ ಪತಿ ಲೋಗನಾಥನ್ ಅವರು ವೈದ್ಯಕೀಯ ಸಹಾಯ ಪಡೆಯುವ ಬದಲು, ಮನೆಯಲ್ಲಿಯೇ ಹೆರಿಗೆ ಮಾಡಿದ್ದಾರೆ ಎಂದು ಪ್ರಾಥಮಿಕ ಆರೋಗ್ಯ ಅಧಿಕಾರಿ ಮೋಹನ್ ದೂರು ದಾಖಲಿಸಿದ್ದಾರೆ.
ತನ್ನ ಕೈಯಲ್ಲಿ ಆಗಲ್ಲ ಎಂದರಿತ ಆತ ಕೊನೆಗೆ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ಪತ್ನಿಯನ್ನು ಕೊಂಡೊಯ್ಯಲಾಗಿದೆ. ಪತಿಯ ಮೇಲೆ ಇದೀಗ ದೂರು ದಾಖಲಾಗಿದೆ.