ಕೊರೆಯುವ ಚಳಿಯಲ್ಲಿ ನವಜಾತ ಶಿಶುವನ್ನು ಹೊಲದಲ್ಲಿ ಬಿಟ್ಟು ಹೋದ ವ್ಯಕ್ತಿ !! |ರಾತ್ರಿಯಿಡೀ ಕಾದು ಮಗುವಿನ ಆರೈಕೆ ಮಾಡಿದ ಬೀದಿ ನಾಯಿಗಳು
ಈ ಕೊರೆಯುವ ಚಳಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ನವಜಾತ ಶಿಶುವೊಂದನ್ನು ಹೊಲದಲ್ಲಿ ಬಿಟ್ಟು ಹೋಗಿದ್ದು, ರಾತ್ರಿಯಿಡೀ ನಾಯಿಯೊಂದು ಆ ಕಂದಮ್ಮನನ್ನು ಆರೈಕೆ ಮಾಡಿರುವ ಹೃದಯವಿದ್ರಾವಕ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಮುಂಗೇಲಿ ಜಿಲ್ಲೆಯ ಲೊರ್ಮಿಯ ಸರಿಸ್ಟಾಲ್ ಗ್ರಾಮದ ಹೊಲವೊಂದರಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗುವನ್ನು ಹೊಲದಲ್ಲಿ ಬಿಟ್ಟು ಹೋಗಲಾಗಿದ್ದು, ರಾತ್ರಿಯಿಡೀ ನಾಯಿಯೊಂದು ಆರೈಕೆ ಮಾಡುತ್ತಿತ್ತು. ಮಗುವಿನ ಅಳುವನ್ನು ಕೇಳಿದ ಗ್ರಾಮಸ್ಥರು ರಕ್ಷಿಸಿದ್ದಾರೆ. ಮಗುವನ್ನು ಹೊಲದಲ್ಲಿ ಬಿಟ್ಟಿದ್ದಕ್ಕಾಗಿ ಜನರು ವಿರೋಧ ವ್ಯಕ್ತಪಡಿಸಿದ್ದು, ಪ್ರಾಣಿಯು ತೋರಿದ ಸಹಾನುಭೂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೊಕ್ಕುಳಬಳ್ಳಿಯೊಂದಿಗೆ ಯಾವುದೇ ಬಟ್ಟೆ ಇಲ್ಲದೆ ಮಗುವನ್ನು ಹೊಲದಲ್ಲೇ ಬಿಟ್ಟು ಹೋಗಲಾಗಿತ್ತು. ಆಶ್ಚರ್ಯ ಎನ್ನುವಂತೆ ಪಕ್ಕದಲ್ಲಿಯೇ ಓಡಾಡುತ್ತಿದ್ದ ಬೀದಿನಾಯಿಗಳು ನವಜಾತ ಶಿಶುವನ್ನು ರಕ್ಷಿಸಿವೆ. ಮಗುವಿನ ಅಳು ಕೇಳಿದ ಗ್ರಾಮಸ್ಥರು ನಾಯಿಮರಿಗಳ ಜೊತೆಯಲ್ಲಿ ಮಗು ಇರುವುದನ್ನು ಕಂಡಿದ್ದಾರೆ. ಯಾವುದೇ ಗಾಯಗಳಿಲ್ಲದೆ ಮಗು ಪತ್ತೆಯಾಗಿದ್ದು, ನಾಯಿಯೊಂದು ತನ್ನ ಮರಿಗಳೊಂದಿಗೆ ಮಗುವನ್ನು ಕಾವಲು ಕಾಯುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಗುವನ್ನು ನೋಡಿದ ಗ್ರಾಮಸ್ಥರು ಕೂಡಲೇ ಸ್ಥಳೀಯ ಪೊಲೀಸರಿಗೆ ಹಾಗೂ ಪಂಚಾಯತ್ಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ.
ಆ ನಾಯಿಗಿರುವ ಸಹಾನುಭೂತಿಯೂ ಮನುಷ್ಯರಿಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ತನ್ನ ನಗುವನ್ನೇ ಈ ರೀತಿ ಹೊಲದಲ್ಲಿ ಬಿಟ್ಟ ಹೆತ್ತವರಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.