ಕರಾವಳಿಗೆ ಮತ್ತೆ ವಕ್ಕರಿಸಿದ ಓಮಿಕ್ರೋನ್ !! | ಉಡುಪಿ ಜಿಲ್ಲೆಯ ಇಬ್ಬರಲ್ಲಿ ವೈರಸ್ ಪತ್ತೆ
ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ಒಂದೇ ಕುಟುಂಬದ 82 ಮತ್ತು 73 ವರ್ಷದವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಕೂಡ ಆರೋಗ್ಯವಾಗಿದ್ದಾರೆ.
ಉಡುಪಿಯ ಪ್ರಕರಣದಲ್ಲಿ ಕುಟುಂಬದಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ಪ್ರಾಥಮಿಕ ಸಂಪರ್ಕಿತರಾದ ಕಾರಣ ಕುಟುಂಬದ 4 ಮಂದಿ ಸದಸ್ಯರು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಒಂದೇ ಕುಟುಂಬದ ಮೂವರಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದ್ದು ಡಬ್ಲ್ಯೂಜಿಎಸ್ ಪರೀಕ್ಷೆ ಯಲ್ಲಿ ಇಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಸೋಂಕು ಹರಡಿದ ಮೂಲ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದೆ.ಇಬ್ಬರು ರೋಗಿಗಳಲ್ಲಿ ಕೂಡಾ ಯಾವುದೇ ಕೋವಿಡ್ ರೋಗ ಲಕ್ಷಣ ಕಂಡುಬಂದಿಲ್ಲ.
ಶನಿವಾರ ದಕ್ಷಿಣ ಕನ್ನಡದಲ್ಲಿ ಎರಡು ಕ್ಲಸ್ಟರ್ ಗಳಲ್ಲಿ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಮೊದಲ ಕೇಸ್ ಪತ್ತೆಯಾಗಿತ್ತು. ಮಂಗಳೂರಿನ ಹೊರವಲಯದ ಮುಡಿಪು ಸಮೀಪ ಇರುವ ವಸತಿ ನಿಲಯದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಮತ್ತು ಮಂಗಳೂರಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಸೇರಿದಂತೆ ಒಟ್ಟು ಐವರಲ್ಲಿ ಓಮಿಕ್ರಾನ್ ಸೋಂಕು ಕಂಡುಬಂದಿತ್ತು.
ರಾಜ್ಯದಲ್ಲಿ ಒಟ್ಟಾರೆ ಓಮಿಕ್ರಾನ್ ಸೋಂಕು ಪೀಡಿತರ ಸಂಖ್ಯೆ 19ಕ್ಕೆ ಏರಿಕೆಯಾದಂತಾಗಿದೆ.